ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಲ್ಲದೇ ಕೋವಿಡ್ ರೆಮಿಡಿಸಿವಿರ್ ಚುಚ್ಚುಮದ್ದುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಒದಗಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಯುಗಾದಿ ಹಬ್ಬದ ನಡುವೆಯೂ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಯಲ್ಲಿ ಸಾರಿಗೆ ಇಲಾಖೆಯ ನೌಕರರ ಮುಷ್ಕರ ಹಾಗೂ ಕೋವಿಡ್ -19ರ ಬಗ್ಗೆ ಅಧಿಕಾರಿಗಳ ಜೊತೆ ಮಹತ್ವದ ಚರ್ಚೆ ನಡೆಸಿದರು.
ಸಭೆಯ ಮುಖ್ಯಾಂಶಗಳು
ಕೆಲಸಕ್ಕೆ ಹಾಜರಾಗುವ ಸಾರಿಗೆ ನೌಕಕರಿಗೆ ಭದ್ರತೆ ನೀಡಬೇಕು, ಸಂಸ್ಥೆಯ ಬಸ್ಗಳಿಗೆ ಹಾನಿ ಮಾಡುವ ಹಾಗೂ ನೌಕರರ ಮೇಲೆ ಹಲ್ಲೆ ನಡೆಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. 6ನೇ ವೇತನ ಜಾರಿ ಅಸಾಧ್ಯದ ಬಗ್ಗೆ ನೌಕರರಿಗೆ ಮನವರಿಕೆ ಮಾಡಬೇಕು. ಅವಶ್ಯಕತೆ ಇದ್ದರೆ ಪ್ರತಿ ಬಸ್ಗೆ ಒಬ್ಬ ಕಾನ್ಸ್‌ಟೇಬಲ್ ಹಾಕಬೇಕು. ಕೆಲಸಕ್ಕೆ ಬಾರದ ನೌಕರರ ವಿರುದ್ದ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ಕೋವಿಡ್ -19
ಖಾಸಗಿ ಆಸ್ಪತ್ರೆಗಳ ಬೆಡ್ಗಳ ಕ್ಷಣ ಕ್ಷಣದ ಮಾಹಿತಿ ಪಡೆಯಬೇಕು, ಲಸಿಕೆ ಕೊರತೆ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ನಿರಂತರ ಸಂಪರ್ಕ ಮಾಡಿ ಅವಶ್ಯಕತೆಗೆ ಅನುಗುಣವಾಗಿ ಲಸಿಕೆ ಪಡೆಯಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ನೈಟ್ ಕರ್ಪ್ಯೂವನ್ನು ಇನ್ನಷ್ಟು ಬಿಗಿ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ, ಮೈಕ್ರೋ ಕಂಟೋನ್ಮೆಂಟ್ ಝೋನ್ಗಳಲ್ಲಿ ಹೆಚ್ಚಿನ ಟೆಸ್ಟ್ ಮಾಡಲು ಸೂಚನೆ ನೀಡಿದರು. ಕಾಂಟ್ಯಾಕ್ಟ್ ಟ್ರೇಸಿಂಗ್ಗೆ ಹೆಚ್ಚಿನ ಒತ್ತು ನೀಡಬೇಕು, ಮಾಸ್ಕ್ ಹಾಕದವರ, ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮವಹಿಸಬೇಕು, ವೆಂಟಿಲೇಟರ್ ಲಭ್ಯತೆ ಬಗ್ಗೆ ಕ್ಷಣದ ಕ್ಷಣದ ಮಾಹಿತಿ ಇರಬೇಕು ಎಂದು ಹೇಳಿದರು.
ಪರಿಸ್ಥಿತಿ ನೋಡಿಕೊಂಡು ನೈಟ್ ಕರ್ಫ್ಯೂ ಮುಂದುವರಿಸುವ ಹಾಗೂ ನಿಲ್ಲಿಸುವ ಬಗ್ಗೆ ಟಾಸ್ಕ್ ಪೋರ್ಸ್ ಸದಸ್ಯರ ಅಭಿಪ್ರಾಯ ಪಡೆಯಲು ಸೂಚಿಸಿದ ಸಿಎಂ, ಮನೆಯಲ್ಲಿ ಐಸೋಲೇಷನ್ ಇರುವವರ ಬಗ್ಗೆ ನಿರಂತರ ಮಾಹಿತಿ ಪಡೆಯಲು ಈ ಹಿಂದಿನ ಕ್ರಮ ಅನುಸರಿಸಲು ತಿಳಿಸಿದರು. ಲಭ್ಯತೆಗೆ ಅನುಗುಣವಾಗಿ ರೆಮಿಡಿಸಿವಿರ್ ಅನ್ನು ಖಾಸಗಿ ಆಸ್ಪತ್ರೆಗಳಿಗೆ ಒದಗಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.