ಬೆಂಗಳೂರು: ರಾಷ್ಟ್ರದಲ್ಲಿ ಕೊರೊನಾ ವಿರುದ್ಧದ ಸಮರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಮೂರು ಹಂತದ ಪ್ಯಾಕೇಜ್ಗಳನ್ನ ಘೋಷಿಸಿದ್ದೇವೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳುವ ಪ್ರತಿ ಮಾತನ್ನೂ ನಾವು ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕರ್ನಾಟಕ ಜನ ಸಂವಾದ ವರ್ಚುವಲ್ ರ‍್ಯಾಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಿಜವಾಗಲೂ ಇದು ಸಂಭ್ರಮಾಚರಣೆಯ ಸಮಯ. ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇಡೀ ಜಗತ್ತೇ ಬೆರಗಾಗಿ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ. ಇಡೀ ವಿಶ್ವದಲ್ಲೇ ಅಗ್ರಗಣ್ಯ ನಾಯಕ ಎನಿಸಿಕೊಂಡಿದ್ದಾರೆ. ವಸುದೈವ ಕುಟುಂಬಕಂ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನು ಜಾರಿಗೆ ತಂದಿದ್ದಾರೆ. ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಮೋದಿಯವರು ಕೈಗೊಂಡ ನಿರ್ಣಯಗಳು ನಿರ್ಣಾಯಕವಾಗಿವೆ. ಮೋದಿಯವರ ಸಲಹೆಯಂತೆ ಇಡೀ ದೇಶವೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಒಟ್ಟಾಗಿ ನಿಂತಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರಸ್ಸೇತರ ಪಕ್ಷಗಳು ಎರಡು ಬಾರಿ ಸರ್ಕಾರ ರಚನೆ ಮಾಡಿದ್ದೇ ನರೇಂದ್ರ ಮೋದಿಯವರ ದೊಡ್ಡ ಸಾಧನೆ. ಶತಮಾನಗಳಿಂದ ನೆನೆಗುದಿಗೆ ಬಿದ್ದಿದ್ದ ಅಯೋಧ್ಯೆ ವಿವಾದವನ್ನು ಬಗೆಹರಿಸಿದರು. ಈಗ ರಾಮಮಂದಿರ ನಿರ್ಮಾಣದ ಕನಸು ಈಡೇರುತ್ತಿದೆ. ಶ್ಯಾಮ್ ಪ್ರಕಾಶ್ ಮುಖರ್ಜಿಯವರ ಕನಸು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ರದ್ದು, ತ್ರಿವಳಿ ತಲಾಖ್ ರದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದಿಂದ ಬಂದ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಿದ್ದು ಮೋದಿಯವರ ಸಾಧನೆ ಎಂದು ಬಣ್ಣಿಸಿದರು.
ಕೊರೊನಾ ನಿಯಂತ್ರಣದ ವಿಷಯದಲ್ಲಿ ರಾಜ್ಯದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅತ್ಯುತ್ತಮ ನಿರ್ಧಾರಗಳನ್ನ ಕೈಗೊಂಡಿದ್ದಾರೆ. ಕೊರೊನಾವನ್ನು ಸಮರ್ಥವಾಗಿ ನಿಯಂತ್ರಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ. ಇದು ಸಿಎಂ ಯಡಿಯೂರಪ್ಪನವರ ಸಾಧನೆ. ಸಿಎಂ ಅಭಿವೃದ್ಧಿಯ ಚಿಂತನೆಯಿಂದ ಕೆಲಸ ಮಾಡಿದ್ದಾರೆ. ನೆರೆ ಬಂದ ಸಂದರ್ಭದಲ್ಲಿಯೂ ಸಂತ್ರಸ್ತರ ಕಣ್ಣೀರು ಒರೆಸಿದವರು ಯಡಿಯೂರಪ್ಪ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಅದ್ಭುತ ಸೇವಾ ಕಾರ್ಯ ಮಾಡಿದ್ದಾರೆ. ಕೋಟ್ಯಂತರ ಸಂಖ್ಯೆಯಲ್ಲಿ ಆಹಾರಪೊಟ್ಟಣ, ರೇಷನ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದಾರೆ. ಯಾವುದೇ ಸ್ವಯಂ ಸೇವಾ ಸಂಸ್ಥೆಗಳು ಮಾಡದ ಕೆಲಸವನ್ನ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ಸಾಧನೆಯನ್ನು ವಿವರಿಸಿದರು.