ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ವೇಳೆ ಕಾರ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಗಳನ್ನು ವಿಮಾ ವ್ಯಾಪ್ತಿಗೆ ತಂದಿರುವ ರೀತಿಯಲ್ಲಿ ಪತ್ರಕರ್ತರನ್ನೂ ವಿಮಾ ವ್ಯಾಪ್ತಿಗೆ ತರುವ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಮಾಧ್ಯಮವನ್ನು ಅಗತ್ಯ ಸೇವೆಯಲ್ಲಿ ಗುರುತಿಸಿರುವುದು ಸ್ವಾಗತಾರ್ಹ. ಆದರೆ, ಪತ್ರಕರ್ತರನ್ನು ಉಚಿತ ಆರೋಗ್ಯ ವಿಮಾ ವ್ಯಾಪ್ತಿಗೆ ಸೇರಿಸದಿರುವುದು ವಿಷಾದದ ಸಂಗತಿ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಕೂಡಲೇ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಬೇಕು. ಹಲವು ರಾಜ್ಯ ಸರ್ಕಾರಗಳು ಪತ್ರಕರ್ತರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಿವೆ. ರಾಜ್ಯ ಸರ್ಕಾರ ಕೂಡ, ಕಾರ್ಯನಿರತ ಪತ್ರಕರ್ತರಿಗಾಗಿ ವಿಮೆ ಯೋಜನ ಘೋಷಿಸಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.
ಮಾಧ್ಯಮ ಕ್ಷೇತ್ರದಲ್ಲಿ ದುಡಿಯುತ್ತಿರುವ ಪತ್ರಕರ್ತರ ಸಮುದಾಯದಲ್ಲೂ ಸಂಕಷ್ಟಗಳು ನೆಲೆಯೂರಿವೆ. ಕೊರೂನಾ ಸಂದರ್ಭದಲ್ಲಿ ಅದೆಲ್ಲವನ್ನೂ ವ್ಯಕ್ತಪಡಿಸದೆ ಪತ್ರಕರ್ತರು ತಾಲೂಕು, ಜಿಲ್ಲಾಡಳಿತಗಳ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದು, ಅವರಿಗೆ ಸರ್ಕಾರ ಪ್ರೋತ್ಸಾಹಿಸುವ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಈ ಕುರಿತು ಪರಿಶೀಲನೆ ನಡೆಸುವ ಭರವಸೆ ನೀಡಿ ಆರ್ಥಿಕ ಇಲಾಖೆಯ ಪರಿಶೀಲನೆಗೆ ಕಡತವನ್ನು ಕಳುಹಿಸಿ ಕೊಡಲು ಸೂಚನೆ ನೀಡಿದರು.