ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹುಚ್ಚುಚ್ಚಾಗಿ ಮಾತನಾಡಿದರೆ ಜನರು ಒಪ್ಪಲ್ಲ. ಜನರ ದೃಷ್ಟಿಯಲ್ಲಿ ವಿಲನ್ ಆಗುತ್ತಾರೆ ಅಷ್ಟೇ. ಮಂತ್ರಿ ಮಾಡಲಿಲ್ಲ ಎಂಬ ಒಂದೇ ಕಾರಣಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಯತ್ನಾಳ್ ದುರಂತ ನಾಯಕ, ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಯತ್ನಾಳ್ ತುಂಬಾ ಹಿರಿಯರು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು. ಅವರ ಭಾಷೆಯಂತೆ ನನಗೂ ಬಳಸಲು ಬರುತ್ತದೆ. ನಾನು ಅವರ ವಿರುದ್ಧ ಭಾಷೆ ಬಳಸಿದರೆ ಯಾರ ಗೌರವ ಕಡಿಮೆಯಾಗುತ್ತದೆ. ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ. ಕ್ಷಮೆ ಕೇಳಿ ಎಂದು ಯತ್ನಾಳ್ಗೆ ಕಿವಿಮಾತು ಹೇಳಿದರು.
ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲರ ವಿರುದ್ಧ ಮಾತನಾಡಿದ್ದಾರೆ. ಚುನಾವಣೆ ವೇಳೆ ಇಂತಹ ಹೇಳಿಕೆಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ. ಶಾಸಕಾಂಗ ಪಕ್ಷದ ಸಭೆ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದೆ. ಸಿಎಂ ವಿರುದ್ಧ ಅಗೌರವವಾಗಿ ಮಾತನಾಡಿದರೆ ನಾನು ಸುಮ್ಮನಿರಲ್ಲ. ನೀವು ಒಬ್ಬರೇನಾ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು? ತಿರುಕನ ಕನಸು ಬಿಟ್ಟುಬಿಡಿ ಎಂದು ಯತ್ನಾಳ್ ವಿರುದ್ಧ ಕಿಡಿಕಾರಿದರು.
ವಿಜಯೇಂದ್ರ ಅವರು ಮೌತ್ ಪೀಸಾ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೂ ಸ್ವಾಭಿಮಾನವಿದೆ. ನಾನು 3 ಬಾರಿ ಶಾಸಕನಾಗಿದ್ದೇನೆ. ವಿಜಯೇಂದ್ರ ಯಾವ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಹೇಳಲಿ. ನಾನೇನು ವಿಜಯೇಂದ್ರರ ಮುಖವಾಣಿಯಲ್ಲ. ನಾನೊಬ್ಬ ಚುನಾಯಿತ ಪ್ರತಿನಿಧಿ ಎಂದರು.