ಬೆಂಗಳೂರು: ಲಾಕ್ ಡೌನ್, ನೈಟ್ ಕರ್ಫ್ಯೂ ಬಗ್ಗೆ ಬೇಕಾಬಿಟ್ಟಿ ಯಾರು ಹೇಳಿಕೆ ಕೊಡುವ ಹಾಗಿಲ್ಲ ಎಂದು ಸಚಿವರು ಮತ್ತು ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ. ಲಾಕ್‌ಡೌನ್, ಕರ್ಫ್ಯೂ, ಕಂಟೈನ್ಮೆಂಟ್ ವಲಯಗಳ ಬಗ್ಗೆ ಆಯಾ ಕಾಲಕ್ಕೆ ತಕ್ಕಂತೆ ಕೇಂದ್ರ ಗೃಹ ಸಚಿವಾಲಯ ಮಾತ್ರ ಆದೇಶ ಹೊರಡಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ನಿಯಮಾವಳಿ ಕುರಿತು ಕೇಂದ್ರದ ಮಾದರಿಯಲ್ಲೇ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಆದೇಶಗಳನ್ನು ಹೊರಡಿಸಲಿದೆ. ಆದರೆ ಇತ್ತೀಚಿಗೆ ಕೆಲವು ಆದೇಶಗಳನ್ನ ಇತರೆ ಇಲಾಖೆಗಳು ಹೊರಡಿಸಿರೋದು ಗಮನಕ್ಕೆ ಬಂದ ಹಿನ್ನೆಲೆ ಕೋವಿಡ್ಗೆ ಸಂಬಂಧಿಸಿದ ಯಾವುದೇ ಸೂಚನೆಗಳನ್ನ ಮತ್ತು ನಿರ್ದೇಶನಗಳನ್ನ ರಾಜ್ಯ ವಿಪತ್ತು ನಿರ್ವಹಣಾ ಕಾರ್ಯ ಸಮಿತಿಯ ಮುಖ್ಯಸ್ಥರೇ ಹೊರಡಸಬೇಕು, ಅದು ಮುಖ್ಯಮಂತ್ರಿಗಳ ಅನುಮೋದನೆ ಪಡೆದ ಬಳಿಕವೇ ಮುಖ್ಯಕಾರ್ಯದರ್ಶಿಗಳು ಆದೇಶ ಹೊರಡಿಸತಕ್ಕದ್ದು ಎಂದು ಸಿಎಂ ಕಚೇರಿಯಿಂದ ಆದೇಶ ಹೊರಬಿದ್ದಿದೆ.
ಕೋವಿಡ್ಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಸಚಿವರುಗಳು ಕೇವಲ ವಿವರಣೆ ನೀಡಬಹುದು. ಬದಲಾಗಿ ಯಾವುದೇ ಸಚಿವರಾಗಲಿ ಅಥವಾ ಅಧಿಕಾರಿಗಳಾಗಲಿ ನಿರ್ಬಂಧ ಹೇರುವ ಬಗ್ಗೆ ಹೇಳಿಕೆಗಳನ್ನ ನೀಡಬಾರದು. ಸಿಎಸ್ ಅದೇಶದ ಆಧಾರದ ಮೇಲೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳು ಎಸ್ಒಪಿಗಳನ್ನ ಹೊರಡಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಶಾಲೆ ಆರಂಭ ಸೇರಿದಂತೆ, ಕೊರೊನಾ ನಿಯಮ ಜಾರಿಗೆ ತರುವ ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಎದುರಾಗಿದ್ದು, ಸಚಿವರುಗಳು ಗೊಂದಲ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಿಕ್ಷಣ ಸಚಿವರು ಹಾಗೂ ವೈದ್ಯಕೀಯ ಸಚಿವರ ನಡುವೆ ಗೊಂದಲ ಏರ್ಪಟ್ಟಿದ್ದರಿಂದ ಕೊರೊನಾ ಸಂಬಂಧ ಯಾರು ಪ್ರಕಟಣೆಗಳನ್ನು ಹೊರಡಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತ ಆದೇಶ ಹೊರಡಿಸಿದ್ದಾರೆ.