ಬೆಂಗಳೂರು: ಸಭಾಪತಿ, ಉಪಸಭಾಪತಿ ಸ್ಥಾನದ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಪರಿಷತ್ ಸದಸ್ಯರ ಸಭೆ ಅಪೂರ್ಣಗೊಂಡಿದ್ದು, ನಾಳೆ ಜೆಡಿಎಸ್ ನಾಯಕರೊಂದಿಗೆ ಚರ್ಚೆ ನಡೆಸುವ ನಿರ್ಧಾರದೊಂದಿಗೆ ಸಭೆಯನ್ನು ಬರಕಾಸ್ತುಗೊಳಿಸಲಾಯಿತು.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನ ಪರಿಷತ್ ಸದಸ್ಯರ ಜೊತೆ ಸಭೆ ನಡೆಸಿದರು. ನಾಳೆಯಿಂದ ವಿಧಾನಸಭೆ ಜಂಟಿ ಅಧಿವೇಶನ ಆರಂಭಗೊಳ್ಳಲಿದ್ದು, ವರ್ಷದ ಮೊದಲ ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಪರಿಷತ್ ಸದಸ್ಯರಿಗೆ ಸಿಎಂ ಸೂಚನೆ ನೀಡಿದರು.
ನಂತರ ಸಭಾಪತಿ, ಉಪಸಭಾಪತಿ ಸ್ಥಾನದ ಕುರಿತು ಚರ್ಚೆ ನಡೆಸಲಾಯಿತು. ಸಭಾಪತಿ ಸ್ಥಾನವನ್ನು ಬಿಜೆಪಿ ಪಡೆದುಕೊಂಡು, ಉಪ ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಸಿಎಂ ಯಡಿಯೂರಪ್ಪ ಅವರಿಗೆ ಒತ್ತಾಯಿಸಿದರು.
ಸಾಕಷ್ಟು ಚರ್ಚೆ ನಡೆಸಿ, ಸಮಾಲೋಚಿಸಿದ ನಂತರ ಇಂದು ಯಾವುದೇ ನಿರ್ಧಾರ ಪ್ರಕಟಿಸದೆ ನಾಳೆ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಸಿಎಂ ನಿರ್ದೇಶನ ನೀಡಿ ಇಂದಿನ ಸಭೆ ಮುಗಿಸಿದರು.
ಇಂದಿನ ಸಭೆಯಲ್ಲೇ ಸ್ಪಷ್ಟ ನಿರ್ಧಾರ ಹೊರಬೀಳಲಿದೆ, ಸಭಾಪತಿ ಸ್ಥಾನ ನಮಗೆ ಸಿಗಲಿದೆ ಎನ್ನುವ ಲೆಕ್ಕಾಚಾರದೊಂದಿಗೆ ಬಂದಿದ್ದ ಹಿರಿಯ ಸದಸ್ಯರು ನಿರಾಶರಾಗಿ ಸಭೆಯಿಂದ ನಿರ್ಗಮಿಸಿದರು.