ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗುವ 2020ನೇ ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗೆ ಆನ್‌ಲೈನ್ ಕೋಚಿಂಗ್ ತರಗತಿಗಳನ್ನು ನಡೆಸಲು ಕಿಯೋನಿಕ್ಸ್ ಸಂಸ್ಥೆಯ ಮುಖಾಂತರ ಅಭಿವೃದ್ಧಿಪಡಿಸಿರುವ ಕಾಂಪ್ರಹೆನ್ಸಿವ್ ಆನ್‌ಲೈನ್ ಪ್ಲಾಟ್ ಫಾರಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಯೋಜನೆಗೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್, ಕೊರೊನಾ ಹಿನ್ನೆಲೆಯಲ್ಲಿ ಸಿಇಟಿ, ನೀಟ್ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಿಎಂ ನಾಯಕತ್ವದಲ್ಲಿ ಅವರ ನೆರವಿಗೆ ಬರಲು ಸರ್ಕಾರ ಉದ್ದೇಶಿಸಿದೆ. ಆದ್ದರಿಂದ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಆನ್ಲೈನ್ನಲ್ಲೇ ಸುಲಭ, ಸರಳವಾಗಿ ಎಲ್ಲಾ ರೀತಿಯ ತರಬೇತಿ ಹಾಗೂ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಪಡೆಯಲು ಸಾಧ್ಯ, ಈ ನಿಟ್ಟಿನಲ್ಲಿ ನಮ್ಮಲ್ಲಿ ಎಲ್ಲಾ ರೀತಿಯ ಉತ್ತಮ ತಂತ್ರಜ್ಞಾನ ಇದೆ. ಹಾಗಾಗಿ ವಿದ್ಯಾರ್ಥಿಗಳ ನೆರವಿಗೆ ಬರಲು, ತರಬೇತಿ, ಪಾಠ, ಪೂರ್ವ ತಯಾರಿ ಪರೀಕ್ಷೆ ನಡೆಸಿ ಎಲ್ಲಾ ರೀತಿಯ ಪರಿಣಾಮಕಾರಿ ವ್ಯವಸ್ಥೆ ಮಾಡಿಕೊಡುತ್ತಿದ್ದೇವೆ. ಇದಕ್ಕಾಗಿ ಗೆಟ್ ಸೆಟ್ ಗೋ ಡಾಟ್ ಇನ್ ನಲ್ಲಿ ಲಾಗಿನ್ ಆಗಬೇಕು ಎಂದರು.
ಇಂತಹ ತರಬೇತಿಗೆ 20 ಸಾವಿರಕ್ಕೂ ಹುಚ್ಚಿನ ಶುಲ್ಕ ಆಗಲಿದೆ. ಆದರೆ ಇದನ್ನು ಉಚಿತವಾಗಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ಯೂಸರ್ ಐಡಿ, ಪಾಸ್ ವರ್ಡ್ ಕಳುಹಿಸಲಾಗುತ್ತದೆ. 1,94,000 ವಿದ್ಯಾರ್ಥಿಗಳಿಗೆ ಇದರಿಂದ ಅವಕಾಶ ಸಿಗಲಿದೆ ಎಂದರು.
ಇನ್ನೂ ಪಾದರಾಯನಪುರ ಘಟನೆ ಬಗ್ಗೆ ಜಮೀರ್ಗೆ ಮಾಹಿತಿ ಇಲ್ಲ, ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಈಗಾಗಲೇ ಅವರನ್ನು ಬಂಧಿಸುವ ಕೆಲಸ ಸರ್ಕಾರ ಮಾಡಿದೆ ಎಂದರು.