ಬೆಂಗಳೂರು: 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಿಎಂ ಅಧಿಕೃತ ನಿವಾಸ ಕಾವೇರಿಯಿಂದ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭಾಗಿಯಾಗಿದರು. ಇದಾದ ಬಳಿಕ, ದೀಪ ಬೆಳಗುವ ಮೂಲಕ ಸಿಎಂ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಆರೋಗ್ಯ ಸಚಿವ ಸುಧಾಕರ್ ಜೊತೆಗಿದ್ದರು.
ಜೀವನದ ಸಮನ್ವಯತೆಯನ್ನೂ ನಮ್ಮ ಹಿರಿಯರು ಯೋಗವೆಂದೇ ಕರೆದರು. ಸಾಂಕ್ರಾಮಿಕದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯೋಗಾಭ್ಯಾಸದ ಪಾತ್ರ ಮಹತ್ವದ್ದಾಗಿದೆ. ಆರೋಗ್ಯಪೂರ್ಣ ಶರೀರ, ಮನಸ್ಸುಗಳ ಜೊತೆಗೆ ಸಾರ್ಥಕ ಜೀವನ ರೂಪಿಸಿಕೊಳ್ಳಲು ನೆರವಾಗುವ ಯೋಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಲಿ ಎಂದು ಸಿಎಂ ಹಾರೈಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ಉಂಟುಮಾಡಿರುವ ಸಂಕಷ್ಟದಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ಯೋಗ ಮಹತ್ವದ ಪಾತ್ರವನ್ನು ವಹಿಸಿದೆ. ಯೋಗಾಭ್ಯಾಸ ನಮ್ಮೆಲ್ಲರ ಬದುಕಿನ ಬದುಕಿನಲ್ಲಿ ಹಾಸುಹೊಕ್ಕಾಗಲಿ ಎಂದು ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ವಿಶ್ವಕ್ಕೆ ಭಾರತ ಕೊಟ್ಟ ಅತ್ಯಂತ ಮಹತ್ವದ ಕೊಡುಗೆ ಯೋಗ. ವಿಶ್ವದಾದ್ಯಂತ 225 ಹೆಚ್ಚಿನ ದೇಶಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಯೋಗವನ್ನು ಮನೆಯಲ್ಲಿಯೇ ಆಚರಿಸಿ ಎನ್ನುವುದು ಈ ಬಾರಿಯ ಘೋಷವಾಕ್ಯವಾಗಿದೆ.
ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸಹ ಬಲಗೊಳಿಸಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಿದೆ. ದೇಹ, ಬುದ್ಧಿ ಮನಸ್ಸು ವಿವೇಕಗಳನ್ನು ಒಂದು ಕಡೆ ಕೂಡಿಸುವುದು ಯೋಗದಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಸಮಗ್ರ ಆರೋಗ್ಯ ಪದ್ಧತಿಯಾಗಿರುವ ಯೋಗ ಔಷಧಿ ರಹಿತ ಸರಳ ಅಡ್ಡಪರಿಣಾಮ ರಹಿತ ಚಿಕಿತ್ಸಾ ಪದ್ಧತಿಯಾಗಿದೆ. ಕರ್ನಾಟಕ ಯೋಗದ ರಾಜಧಾನಿಯಾಗಿದೆ ವಿಶ್ವದ ಪ್ರಥಮ ಯೋಗ ವಿಶ್ವವಿದ್ಯಾಲಯ, ದೇಶದ ಮೊದಲ ಯೋಗ ವಿವಿ ರಾಜ್ಯದಲ್ಲಿದ್ದು, ರಾಜ್ಯ ಯೋಗಾಭ್ಯಾಸದ ನೆಲೆಯಾಗಿದೆ ಎಂದರು.
ನಂತರ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಯೋಗಾಭ್ಯಾಸ ಮಾಡಿದರು. ಯೋಗದ ವಿವಿಧ ಭಂಗಿಗಳ ಪ್ರದರ್ಶನ ಮಾಡಿದರು.
ಇದನ್ನೂ ಓದಿ: ಕೊರೊನಾ ವಿರುದ್ಧ ಯೋಗ ಸಮರ: ವಿಶ್ವದಾದ್ಯಂತ ಲಾಂಚ್ ಆಗಲಿದೆ "M-Yoga ಆ್ಯಪ್"