ಬೆಂಗಳೂರು: ಸರ್ಕಾರದಲ್ಲಿ ಹಾಗೂ ಆಡಳಿತದಲ್ಲಿ ಏನಾದರೂ ತಪ್ಪುಗಳಾದರೆ ಅದನ್ನು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ಅದು ಬಿಟ್ಟು ಅವರ ಕುಟುಂಬ ವರ್ಗದವರನ್ನು ಟಾರ್ಗೆಟ್ ಮಾಡುವುದು ಬ್ಲಾಕ್ ಮೇಲ್ ರಾಜಕಾರಣ ಎನಿಸುತ್ತದೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಹೇಳಿಕೆ ನೀಡಿದ್ದಾರೆ.
ಮಲ್ಲೇಶ್ವರಂ ಕಚೇರಿಯಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಆಡಳಿತ ವಿಚಾರವನ್ನು ಸಿಎಂ ಕುಟುಂಬಕ್ಕೆ ಲಿಂಕ್ ಮಾಡೋದು ತಪ್ಪು. ಸಿಎಂ ಕುಟುಂಬದವರ ಮೇಲೆ ಸಾಫ್ಟ್ ಟಾರ್ಗೆಟ್, ಅಟ್ಯಾಕ್ ಮಾಡುವ ಪ್ರಯತ್ನ ಸರಿಯಲ್ಲ. ಏನೇ ಸಮಸ್ಯೆ ಇದ್ರೂ ಸಿಎಂ ಗಮನಕ್ಕೆ ತರಲಿ. ಸಿಎಂ ಕುಟುಂಬಸ್ಥರ ಮೇಲೆ ಆರೋಪ ಮಾಡೋದು ಬೇಡ. ಇಂತಹ ಬ್ಲಾಕ್ಮೇಲ್ ಕೆಲಸ ಸರಿಯಲ್ಲ. ಈಗಾಗಲೇ ಇದರ ಬಗ್ಗೆ ವಿಜಯೇಂದ್ರ ಅವರೇ ಪತ್ರದಲ್ಲಿ ವಿವರಿಸಿದ್ದಾರೆ ಎಂದರು.
ನಿನ್ನೆ ನಡೆದಿದ್ದು ಒಕ್ಕಲಿಗರ ಪ್ರತಿಭಟನೆಯಲ್ಲ. ಅದು ಡಿ.ಕೆ.ಶಿವಕುಮಾರ್ ಬೆಂಬಲಿಗರ, ಹಿತೈಷಿಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ. ಸದ್ಯ ಪ್ರತಿಭಟನೆ ಶಾಂತಿಯುತವಾಗಿದ್ದು, ಸಮಾಧಾನ ತಂದಿದೆ. ಆದರೆ ಭ್ರಷ್ಟಾಚಾರ ಸಂಬಂಧಿ ಪ್ರಕರಣಗಳಿಗೆ ಜಾತಿ ಲೇಪನ ಮಾಡಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದು ಸರಿಯಲ್ಲ. ಇನ್ನಾದರೂ ಜಾತಿ ರಾಜಕೀಯ ಬಿಟ್ಟು ಅಭಿವೃದ್ದಿಗೆ ಪೂರಕವಾದ ರಾಜಕೀಯ ಮಾಡಬೇಕು ಎಂದರು.
ಇನ್ನು, ರಾಮಕೃಷ್ಣನಗರದಲ್ಲಿ ಇರೋದು ಸಿಎಂ ಸೈಟುಗಳು. ಅವನ್ನು ಅಲ್ಲಿಯ ನಾಗರಿಕರು ಆಟದ ಮೈದಾನವಾಗಿ ಬಳಸುತ್ತಿದ್ದರು. ಈಗ ಸಿಎಂ ಸೈಟ್ಗಳನ್ನು ಸಂಘ ಸಂಸ್ಥೆಗಳಿಗೆ ವಿತರಿಸಲಾಗಿದೆ. ಅದಕ್ಕೆ ನಾಗರಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯವನ್ನೇ ದೊರೆಸ್ವಾಮಿಯವರು ನನ್ನ ಗಮನಕ್ಕೆ ತಂದು, ಆಟದ ಮೈದಾನವಾಗಿ ಅದನ್ನು ಪರಿವರ್ತಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಈ ವಿಷಯವನ್ನು ಸಿಎಂ ಗಮನಕ್ಕೆ ತರುತ್ತೇನೆ ಎಂದರು.