ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಮತ್ತು ಪಕ್ಷದ ನಾಯಕತ್ವ ಚರ್ಚೆ, ಆಂತರಿಕ ಬಿಕ್ಕಟ್ಟಿನ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದಿನ ಎರಡು ವರ್ಷ ಪೂರೈಸಲಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ಸಿಎಂ ಅಭ್ಯರ್ಥಿಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ನಾಯಕರು. ಈಗಾಗಲೇ ಹೈಕಮಾಂಡ್ ಕೂಡಾ ಬಿಎಸ್ವೈ ಅವರೇ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಸುಮ್ಮನೇ ಇಲ್ಲದೇ ಇರುವ ಕುರ್ಚಿಗೆ ಟವೆಲ್ ಹಾಕಿ ಪ್ರಯೋಜನ ಏನು. ಕೆಲವು ಬಾರಿ ಬಸ್ ಹೊರಡದಿದ್ದರೂ, ಆ ಸೀಟುಗಳಿಗೆ ಕೆಲವರು ಟವೆಲ್ ಹಾಕಿ ನಾನೇ ಸಿಎಂ ಅಂತಾರೆ. ಅವರೆಲ್ಲ ಪಂಕ್ಚರ್ ಆಗಿರುವ ಬಸ್ನಲ್ಲಿ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಾನು ಯಾವುದೇ ರೇಸ್ ಕುದುರೆ ಹಿಂದೆ ಓಡುವುದಿಲ್ಲ. ಇನ್ನೆರಡು ವರ್ಷ ಯಾವುದೇ ಬದಲಾವಣೆ ಇಲ್ಲದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಸಿಎಂ ಬಸ್, ಕುರ್ಚಿ ಎಲ್ಲವೂ ಸರಿಯಾಗಿಯೇ ಇದೆ. ಆದರೆ ಈಗ ಸಿಎಂ ಆಗ್ತೇವೆ ಅಂತ ಹೊರಟಿರುವವರ ಬಸ್ ಪಂಕ್ಚರ್ ಆಗಿದೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತ್ಯುತ್ತರ ನೀಡಿದ ಸಚಿವ ಆರ್. ಅಶೋಕ್, ಇದು ಪಾರ್ಟಿಯ ಆಂತರಿಕ ವಿಚಾರ, ಸಿದ್ದರಾಮಯ್ಯ ಅವರಿಗೆ ಅಗತ್ಯವಿಲ್ಲ. ಅವರ ಪಕ್ಷದಲ್ಲೇ ಖರ್ಗೆನಾ, ಸಿದ್ಧರಾಮಯ್ಯನಾ, ಡಿ.ಕೆ.ಶಿ.ನಾ ಎಂಬ ಗೊಂದಲ, ಫೈಟ್ ಇದೆ. ಅದನ್ನು ಸರಿಪಡಿಸಿಕೊಳ್ಳಲಿ. ಆಮೇಲೆ ನಮ್ಮತ್ರ ಬರಲಿ, ನಾವೂ ಫೈಟ್ ಮಾಡುತ್ತೇವೆ ಎಂದು ಟಾಂಗ್ ಕೊಟ್ಟರು.
ಓದಿ.. ಸಂಚಲನ ಸೃಷ್ಟಿಸಿದ ಸಹಿ ಸಂಗ್ರಹ, ಸಿಎಂ ಕುರ್ಚಿ ವಿಚಾರ.. ಕಮಲಪಾಳಯ ಹೀಗನ್ನುತ್ತೆ..