ಬೆಂಗಳೂರು: ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ನಂತರ ಎರಡು ದಿನಗಳ ಕಾಲ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆರಳುತ್ತಿದ್ದಾರೆ. ಈಗಾಗಲೇ ಒಂದು ಬಾರಿ ಪ್ರಚಾರ ನಡೆಸಿದ್ದ ಸಿಎಂ ಇದೀಗ ಎರಡನೇ ಬಾರಿ ಪ್ರಚಾರಕ್ಕೆ ಕುಂದಾನಗರಿಗೆ ತೆರಳುತ್ತಿದ್ದಾರೆ.
ನಾಳೆ ಮಧ್ಯಾಹ್ನ ಚುನಾವಣಾ ಪ್ರಚಾರ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಲಿರುವ ಸಿಎಂ ಯಡಿಯೂರಪ್ಪ, ಕುಟುಂಬ ಸದಸ್ಯರ ಜೊತೆ ಯುಗಾದಿ ಹಬ್ಬ ಆಚರಿಸಲಿದ್ದಾರೆ. ಹಬ್ಭದ ನಂತರ ಮತ್ತೆ ಎರಡು ದಿನ ಚುನಾವಣಾ ಪ್ರಚಾರಕ್ಕೆ ಸಿಎಂ ತೆರಳಲಿದ್ದಾರೆ.
ಬುಧವಾರ ಬೆಳಗ್ಗೆ 10 ಗಂಟೆಗೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಬೆಳಗಾವಿ ಜಿಲ್ಲೆಯ ಮೂಡಲಗಿಗೆ ಸಿಎಂ ಯಡಿಯೂರಪ್ಪ ತೆರಳಲಿದ್ದಾರೆ. ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಪಕ್ಷದ ವತಿಯಿಂದ ಅರಭಾವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದು ಸಂಜೆ 5:20ಕ್ಕೆ ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿಯಿಂದ ಗೋಕಾಕ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದಿನ ಪ್ರಚಾರಕಾರ್ಯ ಮುಗಿಸಿ ರಾತ್ರಿ 9 ಗಂಟೆಗೆ ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಬೆಳಗಾವಿ ನಗರ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಿಎಂ, ಸಂಜೆ 5 ಗಂಟೆಗೆ ಬೆಳಗಾವಿಯಲ್ಲಿ ಎರಡನೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ ಪರ ಪ್ರಚಾರ ನಡೆಸಲಿದ್ದಾರೆ.
ರಾತ್ರಿ 7.20ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಟು ರಾತ್ರಿ 9.10 ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದ್ದಾರೆ.