ಬೆಂಗಳೂರು : 2021-22ರ ರಾಜ್ಯ ಬಜೆಟ್ನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಾರಿಗೆ ಇಲಾಖೆಗೆ ಭರ್ಜರಿ ಗಿಫ್ಟ್ ನೀಡಿದ್ದು, ರಾಜ್ಯದಲ್ಲಿ ಹೊಸದಾಗಿ 52 ಬಸ್ ನಿಲ್ದಾಣ, 16 ಬಸ್ ಡಿಪೊ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾರೆ.
ಸಾರಿಗೆ ಸೌಲಭ್ಯ ವಿಸ್ತರಿಸಲು ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 52 ಬಸ್ ನಿಲ್ದಾಣ, 16 ಬಸ್ ಡಿಪೊ ನಿರ್ಮಾಣ ಮಾಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೆ, ವಾಹನ ಮಾಲೀಕತ್ವ ವರ್ಗಾವಣೆ, ಸರಕು ಸಾಗಣೆ ರಹದಾರಿ ಮತ್ತು ವಾಹನಗಳ ಅರ್ಹತಾ ಪತ್ರ (ಫಿಟ್ನೆಸ್ ಸರ್ಟಿಫಿಕೇಟ್) ನೀಡುವ ಸೇವೆಗಳನ್ನು ಸಂಪರ್ಕ ರಹಿತ ಮತ್ತು ನಗದು ರಹಿತ ವ್ಯವಸ್ಥೆ ಮೂಲಕ ತಲುಪಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ 66 ಕಚೇರಿಯಲ್ಲಿರುವ ಹಳೆಯ ದಾಖಲೆಗಳ ಡಿಜಿಟಲೀಕರಣ ಮತ್ತು ಕಾಗದ ರಹಿತ ಕಚೇರಿಗಳನ್ನಾಗಿ ಪರಿವರ್ತನೆ ಮಾಡುವುದು, ವಾಹನಗಳ ನೋಂದಣಿ, ಪರವಾನಿಗೆ ಮತ್ತಿತರೆ ಸೌಲಭ್ಯಗಳನ್ನು ಒದಗಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸೌಲಭ್ಯ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.
ಬೆಳಗಾವಿ, ಧಾರವಾಡ, ಮಂಗಳೂರು, ರಾಯಚೂರು ಹಾಗೂ ಹಾಸನಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ಲೋಕಾರ್ಪಣೆ, ಧಾರವಾಡ ಹಾಗೂ ಮೈಸೂರಿನಲ್ಲಿ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳ ಸ್ಥಾಪನೆ, ಕೇಂದ್ರದ ಮಾರ್ಗಸೂಚಿಗೆ ಅನುಗುಣವಾಗಿ ಅಧಿಕೃತ ವಾಹನಗಳ ಸ್ಕ್ರಾಪಿಂಗ್ ಸೆಂಟರ್ ಸ್ಥಾಪನೆ, ವಾಯುಮಾಲಿನ್ಯ ತಡೆಗಟ್ಟಲು ಹಸಿರು ತೆರಿಗೆ ನಿಧಿ ಬಳಸಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಾಗಿ ಸಿಎಂ ಬಜೆಟ್ ಮಂಡನೆ ವೇಳೆ ತಿಳಿಸಿದರು.