ಬೆಂಗಳೂರು: ವರ್ಷಗಟ್ಟಲೆಯಿಂದ ಸಂಪುಟ ಸೇರ್ಪಡೆಗೆ ಕಾಯುತ್ತಿರುವ ಉಮೇಶ್ ಕತ್ತಿ ಹಾಗೂ ಆರ್.ಶಂಕರ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಭರವಸೆ ನೀಡಿದ್ದಾರೆ. ಇನ್ನೊಂದೆರಡು ದಿನದಲ್ಲಿ ಸಂಪುಟ ಸೇರುತ್ತೀರಿ ಎನ್ನುವ ಆಶ್ವಾಸನೆಯೊಂದಿಗೆ ಸಚಿವಾಕಾಂಕ್ಷಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಇಂದು ಸಚಿವ ಸ್ಥಾನ ಆಕಾಂಕ್ಷಿಗಳಾದ ಉಮೇಶ್ ಕತ್ತಿ ಹಾಗೂ ಆರ್.ಶಂಕರ್ ಭೇಟಿ ನೀಡಿದ್ದರು. ಸಮುದಾಯ ಭವನ ನಿರ್ಮಾಣಕ್ಕೆ ಅನುದಾನದ ಪತ್ರವನ್ನು ಸಿಎಂ ಬಿಎಸ್ವೈಗೆ ನೀಡಲು ಉಮೇಶ್ ಕತ್ತಿ ಮುಂದಾಗಿದ್ದರು. ಈ ವೇಳೆ, ಪತ್ರ ಏನು ಕೊಡಬೇಡಿ ಹೋಗಿ, ಇನ್ನೊಂದೆರಡು ದಿನಗಳಲ್ಲಿ ನೀವೇ ಮಂತ್ರಿ ಆಗುತ್ತೀರಿ ಎಂದು ನಗುನಗುತ್ತಾ ಹೇಳಿದ್ದಾರೆ.
ಬಳಿಕ ಆರ್. ಶಂಕರ್ಗೂ ಇದೇ ಮಾತು ಹೇಳಿದ ಸಿಎಂ, ಬನ್ನಿ ತಿಂಡಿ ತಿನ್ನಿ ಎಂದು ಉಪಹಾರಕ್ಕೆ ಆಹ್ವಾನಿಸಿರು. ಬಿಎಸ್ವೈ ಜೊತೆ ಉಪಹಾರ ಸೇವಿಸಿದ ಕತ್ತಿ ಮತ್ತು ಶಂಕರ್ ಖುಷಿಯಿಂದ ಹೊರಬಂದಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿಸಿ ಸಭಾಪತಿಗಳಿಂದ ತನಿಖೆಗೆ ಆದೇಶ : ಸಚಿವ ಮಾಧುಸ್ವಾಮಿ
ಸಿಎಂ ಭೇಟಿ ನಂತರ ಮಾತನಾಡಿದ ಆರ್.ಶಂಕರ್, ನಾನು ಎಂದಿನಂತೆ ಸಿಎಂ ಭೇಟಿಗೆ ಹೋದೆ, ಏನೂ ಮಾತನಾಡಲಿಲ್ಲ. ಅವರೇ ನೀನು ಇನ್ನೆರಡು ಮೂರು ದಿನಗಳಲ್ಲಿ ಮಂತ್ರಿ ಆಗ್ತೀಯ ಎಂದರು. ಉಮೇಶ್ ಕತ್ತಿಗೂ ಇದನ್ನೇ ಹೇಳಿ, ಸಚಿವನಾದ ಬಳಿಕ ಅಹವಾಲು ಕೊಡಿ ಎಂದು ಹೇಳಿದರು. ಈಗ ವಾತಾವರಣ ತಿಳಿಯಾಗಿದೆ. ನಾನು ಮಂತ್ರಿ ಆಗುವ ಭರವಸೆ ಇದೆ. ಯಾರ‍್ಯಾರನ್ನು ಮಂತ್ರಿ ಮಾಡ್ತಾರೋ ನೋಡಬೇಕು ಎಂದರು.