ಬೆಂಗಳೂರು: ಮೆಟ್ರೋ ರೈಲು ಮಾರ್ಗ ಪರೀಕ್ಷೆಗೆ ತೆರಳಿದ್ದ ವೇಳೆ ಸಿಎಂ ಹಾಗೂ ಸಚಿವರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಂಡಿಸಿದ ವಾದವನ್ನು ಹೈಕೋರ್ಟ್ ಸಮ್ಮತಿಸಿದೆ.
ಮುಖ್ಯಮಂತ್ರಿಗಳು ಹಾಗೂ ಸಚಿವರು ಸರ್ಕಾರಿ ಕಾರ್ಯ ನಿರ್ವಹಣೆ ನಿಮಿತ್ತ ಮೆಟ್ರೋ ರೈಲು ಮಾರ್ಗ ಪರಿಶೀಲಿಸಲು ತೆರಳಿದ್ದರು. ಈ ವೇಳೆ, ಸ್ವಲ್ಪ ಮಟ್ಟಿಗೆ ಜನ ಸೇರಿದ್ದಾರೆ. ಉದ್ದೇಶಪೂರ್ವಕವಾಗಿ ಸಿಎಂ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ ಎಂದು ವಾದ ಮಂಡಿಸಿದ ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರ ವಾದವನ್ನು ಹೈಕೋರ್ಟ್ ಸಮ್ಮತಿಸಿದೆ.
ಹಾಗೆಯೇ, ಈ ಸಂಬಂಧ ಅರ್ಜಿದಾರರು ಕುಂದು ಕೊರತೆ ಪರಿಹಾರ ಘಟಕಕ್ಕೆ ದೂರು ನೀಡಿರುವುದರಿಂದ ಕೋರ್ಟ್ ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಎರಡನೇ ಹಂತದ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ವೇಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಇತರ ಸಚಿವರು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ವಕೀಲ ಜಿ.ಆರ್ ಮೋಹನ್ ಮೆಮೊ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಪೀಠ, ರಾಜಕೀಯ ರ‍್ಯಾಲಿ, ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮತ್ತು ದೇವಾಲಯಕ್ಕೆ ಭೇಟಿ ನೀಡಿದ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: 'ನ್ಯಾಯ್; ದಿ ಜಸ್ಟಿಸ್' ಸುಶಾಂತ್ ಜೀವನಾಧಾರಿತ ಚಿತ್ರ ನಾಳೆಯೇ ಬಿಡುಗಡೆ
ಇನ್ನು, ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾದ ಪ್ರಕರಣ ಕುರಿತು ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರ್ಕಾರ ಮತ್ತಷ್ಟು ಕಾಲಾವಕಾಶ ಕೋರಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಅಲ್ಲದೇ, ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣಗಳ ಸಂಬಂಧ ಸಾರ್ವಜನಿಕರು ದೂರು ದಾಖಲಿಸಲು ಕುಂದು ಕೊರತೆ ಪರಿಹಾರ ಘಟಕ ಆರಂಭಿಸಿರುವ ಬಗ್ಗೆ ದೃಶ್ಯ ಮಾಧ್ಯಮಗಳು, ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಿ, ದೂರನ್ನು ಹೇಗೆ ಮತ್ತು ಎಲ್ಲಿ ದಾಖಲಿಸಬೇಕು ಎಂಬ ಬಗ್ಗೆ ಅರಿವು ಮೂಡಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.