ಬೆಂಗಳೂರು: ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವೈದ್ಯಕೀಯ ತಪಾಸಣೆ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಆರ್.ಟಿ, ನಗರದ ಖಾಸಗಿ ನಿವಾಸಕ್ಕೆ ವಾಪಸ್ ಆಗಿದ್ದಾರೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರ ರಕ್ತ ಪರೀಕ್ಷೆ ಸೇರಿ ದೈಹಿಕ ತಪಾಸಣೆ ನಡೆಸಲಾಯಿತು. ಕೋವಿಡ್ ಪಾಸಿಟಿವ್ ಹೊರತುಪಡಿಸಿ ಎಲ್ಲ ಪರೀಕ್ಷಾ ವರದಿ ಸಾಮಾನ್ಯ ಎಂದು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ನಿವಾಸಕ್ಕೆ ಕಳುಹಿಸಿಕೊಡಲಾಗಿದೆ.
ಸಿಎಂ ಪುತ್ರ ಭರತ್ ಮತ್ತು ಸೊಸೆ ಇಬ್ಬನಿ ಅವರ ಆರೋಗ್ಯ ತಪಾಸಣಾ ವರದಿ ಬಂದ ಬಳಿಕ ಅವರನ್ನು ನಿವಾಸಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದು, ಭರತ್ ಮತ್ತು ಇಬ್ಬನಿ ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲೇ ಇದ್ದಾರೆ.
ಮಣಿಪಾಲ್ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡು ಆರ್ಟಿ ನಗರ ನಿವಾಸಕ್ಕೆ ಬಂದ ಸಿಎಂ ಬೊಮ್ಮಾಯಿ ಮನೆಯಲ್ಲೇ ಒಂದು ವಾರ ಕ್ವಾರಂಟೈನ್ ಆಗಲಿದ್ದಾರೆ. ಆರ್ಟಿಪಿಸಿಆರ್ ನೆಗೆಟಿವ್ ಬಂದ ನಂತರವಷ್ಟೇ ಕ್ವಾರಂಟೈನ್ನಿಂದ ಸಿಎಂ ಹೊರಬರಲಿದ್ದಾರೆ.
ಮನೆಯಿಂದಲೇ ವರ್ಚುಯಲ್ ಸಭೆಗಳನ್ನು ನಡೆಸಲು ಸಿಎಂ ನಿರ್ಧರಿಸಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯದ ಕೋವಿಡ್ ಸ್ಥಿತಿಗತಿಗೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಜೊತೆ ವರ್ಚುಯಲ್ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: ಹೃತಿಕ್ ರೋಷನ್ ಮಾಜಿ ಪತ್ನಿಗೆ ಒಮಿಕ್ರಾನ್.. ಹಿಂದಿ ಚಿತ್ರರಂಗದ ಮತ್ತಿಬ್ಬರಿಗೆ ಅಂಟಿದ ಕೊರೊನಾ!