ಬೆಂಗಳೂರು: ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿ ಪ್ರವಾಸಕ್ಕೆ ತೆರಳುತ್ತಿದ್ದು, ಅಲ್ಲಿ ರಾಜ್ಯದ ಸಂಸದರು, ಕಾನೂನು ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಜೊತೆಗೆ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಫೆ.7 ರಂದು ಬೆಳಗ್ಗೆ ಕೆಂಪೇಗೌಡಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಲಿರುವ ಸಿಎಂ ಬೆಳಗ್ಗೆ 9.40 ಕ್ಕೆ ನವದೆಹಲಿ ತಲುಪಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು, ರಾಜ್ಯದ ಬಿಜೆಪಿ ಸಂಸದರ ಜೊತೆ ಸಭೆ ನಡೆಸಲಿದ್ದಾರೆ. ಬಜೆಟ್ ಪೂರ್ವದಲ್ಲಿ ವಾಡಿಕೆಯಂತೆ ಔಪಚಾರಿಕ ಸಭೆ ನಡೆಸಲಿದ್ದಾರೆ.
ಅಂದು ರಾತ್ರಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ, ಮಂಗಳವಾರ ಬೆಳಗ್ಗೆ 8 ಗಂಟೆಗೆ ಅಂತಾರಾಜ್ಯ ಜಲವ್ಯಾಜ್ಯಗಳ ಕುರಿತು ದೆಹಲಿಯಲ್ಲಿರುವ ರಾಜ್ಯದ ಕಾನೂನು ತಜ್ಞರ ಜೊತೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ನಂತರ ವಿವಿಧ ಇಲಾಖೆಗಳ ಅಭಿವೃದ್ಧಿ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ.
ರಾಜ್ಯಕ್ಕೆ ಮರಳುವುದನ್ನು ಕಾಯ್ದಿರಿಸಿರುವ ಸಿಎಂ ವರಿಷ್ಠರನ್ನು ಭೇಟಿಯಾಗಲಿದ್ದಾರೆ. ಇನ್ನು ಸಮಯ ನಿಗದಿ ಬಾಕಿ ಇದ್ದು, ವರಿಷ್ಠರ ಭೇಟಿ ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಮೂಲಗಳ ಪ್ರಕಾರ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿ ಕುರಿತು ವರಿಷ್ಠರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
(ಇದನ್ನೂ ಓದಿ: ಕೋವಿಡ್ನಿಂದ ಪತಿ ನಿಧನ : ತಬ್ಬಲಿ ಮಗು, ವಿಧವೆಗೆ ಹೊಸ ಬಾಳು ನೀಡಿದ ಮೃತ ಗಂಡನ ಸಹೋದರ!)