ಬೆಂಗಳೂರು : ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಮೊದಲನೇ ಗಣೇಶ ಚತುರ್ಥಿ. ಸಂಕಷ್ಟಗಳನ್ನು ನಿವಾರಿಸುವ ದೇವರ ಹಬ್ಬ.
ಹಾಗಾಗಿ, ರಾಜಕೀಯ ಸಂಕಷ್ಟಗಳಿಂದ ಪಾರು ಮಾಡುವಂತೆ ಆರ್‌ಟಿನಗರದ ತಮ್ಮ ನಿವಾಸದಲ್ಲಿ ವಿನಾಯಕನಿಗೆ ಪೂಜೆ ಸಲ್ಲಿಸಿದ್ದಾರೆ. ಹಬ್ಬದ ಸಂಭ್ರಮದ ನಡುವೆಯೂ ಮನೆ ಬಳಿ ಬಂದವರ ಅಹವಾಲುಗಳನ್ನು ಆಲಿಸಿದ್ದಾರೆ.
ನಾಡಿನ ಜನತೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿದ್ದರೂ ಸಂಕಷ್ಟದಲ್ಲಿರುವ ಜನರು ಅಹವಾಲು ಹಿಡಿದು ಮುಖ್ಯಮಂತ್ರಿಗಳ ನಿವಾಸದ ಎದುರು ಜಮಾವಣೆಗೊಂಡಿದ್ದರು. ನೆರವಿನ ನಿರೀಕ್ಷೆಯಲ್ಲಿ ಆರ್ ಟಿ ನಗರದಲ್ಲಿರುವ ಸಿಎಂ ನಿವಾಸದ ಮುಂದೆ ಸಿಎಂಗಾಗಿ ಕಾದು ಕುಳಿತಿದ್ದರು.
ಅಹವಾಲು ಹಿಡಿದು ಬಂದಿದ್ದ ಜನರಿಗೆ ನಿರಾಶೆ ಮಾಡದ ಸಿಎಂ ಬಸವರಾಜ ಬೊಮ್ಮಾಯಿ, ಸಾರ್ವಜನಿಕರಿಂದ ಅಹವಾಲು ಆಲಿಸಿದರು. ಪ್ರತಿಯೊಬ್ಬರ ಕುಂದುಕೊರತೆ, ಕಷ್ಟ ಕೇಳಿದರು. ನೆರವಿನ ಅಭಯ ನೀಡಿ ಕಳುಹಿಸಿಕೊಟ್ಟರು.
ನೆರವು ಕೋರಿ ಪ್ರತಿ ದಿನವೂ ಸಿಎಂ ನಿವಾಸಕ್ಕೆ ಹಲವಾರು ಜನ ಬರುತ್ತಿದ್ದಾರೆ. ಹಬ್ಬವಾದರೂ ಕೂಡ ಜನರು ಬರುವುದು ಮಾತ್ರ ತಪ್ಪುತ್ತಿಲ್ಲ. ಹಾಗಾಗಿ, ಜನರ ಕಷ್ಟ ಹೇಳಿಕೊಳ್ಳಲು ಜನತಾ ದರ್ಶನದಂತಹ ವ್ಯವಸ್ಥೆ ಮಾಡಿದರೆ ಅನುಕೂಲ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿವೆ.