ಬೆಂಗಳೂರು : ಅಕ್ಟೋಬರ್ 7ರಂದು ಚಾಮರಾಜನಗರಕ್ಕೆ ಸಿಎಂ ಭೇಟಿ ನೀಡಲಿದ್ದಾರೆ. ಅಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಸ್ಪತ್ರೆ ಉದ್ಘಾಟನೆಗೆಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಿ ಎಸ್ ಬೊಮ್ಮಾಯಿ ಕೂಡ ಭಾಗವಹಿಸಲಿದ್ದಾರೆ ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.
ಆರ್‌ಟಿನಗರದ ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಮಧ್ಯಾಹ್ನ 3.30 ರಿಂದ 4.30ರವರೆಗೆ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಚಾಮರಾಜನಗರಕ್ಕೆ ಸಿಎಂ ಆದವರು ಹೋಗಲ್ಲ ಅಂತಾ ಏನೂ ಇಲ್ಲ. ಯಡಿಯೂರಪ್ಪ ಅವರೂ ಚಾಮರಾಜನಗರಕ್ಕೆ ಬಂದಿದ್ದರು. ಮಲೆ ಮಹದೇಶ್ವರ ಬೆಟ್ಟಕ್ಕೆ ಯಡಿಯೂರಪ್ಪನವರೂ ಹೋಗಿದ್ದರು ಎಂದು ತಿಳಿಸಿದರು.
ದಸರಾಗೆ ಸಿಎಂಗೆ ಆಹ್ವಾನ : ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೈಸೂರು ಜಿಲ್ಲಾಡಳಿತದ ಪರವಾಗಿ ಅಧಿಕೃತವಾಗಿ ಆಹ್ವಾನ ನೀಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಕಂದಾಯ ಸಚಿವ ಆರ್.ಅಶೋಕ್, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಮೈಸೂರು ಸಂಸದ ಪ್ರತಾಪ ಸಿಂಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದಸರಾ ಉದ್ಘಾಟನೆಗೆ ನಾವೆಲ್ಲರೂ ತೆರಳುತ್ತೇವೆ : ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಇವತ್ತು ದಸರಾ ಉತ್ಸವ ಸಮಿತಿಯವರು ಬಂದು ಆಮಂತ್ರಣ ಕೊಟ್ಟಿದ್ದಾರೆ. ನನಗೆ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಗೆ ಆಮಂತ್ರಣ ನೀಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್, ಸಂಸದರು ಜೊತೆಗೆ ಉತ್ಸವ ಸಮಿತಿಯವರು ಬಂದು ಆಮಂತ್ರಿಸಿದ್ದಾರೆ. ಆಮಂತ್ರಣವನ್ನ ಸ್ವೀಕಾರ ಮಾಡಿದ್ದೀವಿ. ದಸರಾ ಉದ್ಘಾಟನೆಗೆ ನಾವೆಲ್ಲರೂ ತೆರಳುತ್ತೇವೆ ಎಂದರು.
ಓದಿ: ಅಕ್ಟೋಬರ್ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಮರಾಜನಗರ ಪ್ರವಾಸ