ಬೆಂಗಳೂರು: ಎರಡು ದಿನಗಳ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳಲು ದಿಲ್ಲಿಯಲ್ಲಿ ಸರ್ಕಸ್ ನಡೆಸುತ್ತಿದ್ದು, ಅಮಿತ್ ಶಾ ನಂತರ ಇದೀಗ ಜೆಪಿ ನಡ್ಡಾ ಅಂಗಳಕ್ಕೆ ಸಂಪುಟ ಪ್ರಹಸನದ ವಿಷಯ ತಲುಪಿದೆ.
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಸಿಎಂ ಬೊಮ್ಮಾಯಿ, ರಾಜ್ಯ ರಾಜಕಾರಣದ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸಿದ್ದಾರೆ. ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಚುನಾವಣೆಗೆ ಸಂಪುಟವನ್ನು ಸನ್ನದ್ದಗೊಳಿಸಬೇಕಿದೆ, ಕೆಲ ಹಿರಿಯರನ್ನು ಕೈಬಿಟ್ಟು ಹೊಸಬರನ್ನೇ ಸೇರಿಸಿಕೊಂಡು ಚುನಾವಣಾ ಸಂಪುಟ ರಚಿಸಿಕೊಂಡರೆ ಅನುಕೂಲವಾಗಲಿದೆ ಅದಕ್ಕೆ ಅವಕಾಶ ಕಲ್ಪಿಸಿ ಎಂದು ಸಿಎಂ ಬೊಮ್ಮಾಯಿ ಅಮಿತ್ ಶಾಗೆ ಮನವಿ ಮಾಡಿದ್ದಾರೆ.
ಖಾಲಿ ಸ್ಥಾನ ಭರ್ತಿ ಅಗತ್ಯತೆ, ಆಕಾಂಕ್ಷಿಗಳ ಒತ್ತಡವನ್ನು ತಿಳಿಸಿದ್ದು, ಪದೇ ಪದೆ ಆಕಾಂಕ್ಷಿಗಳು ದೆಹಲಿ ಪ್ರವಾಸ ಮಾಡುವುದರಿಂದ ಸೃಷ್ಟಿಯಾಗುತ್ತಿರುವ ಗೊಂದಲ ಆಡಳಿತದ ಮೇಲೆ ಬೀಳುತ್ತಿರುವ ಪರಿಣಾಮಗಳ ಕುರಿತು ವಿವರ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಮಾತುಗಳನ್ನು ಆಲಿಸಿದ ಅಮಿತ್ ಶಾ, ಸದ್ಯ ಪಂಚ ರಾಜ್ಯಗಳ ಚುನಾವಣೆ ಇದೆ. ರಾಜ್ಯದಲ್ಲೂ ಬಜೆಟ್ ಮಂಡನೆಗೆ ಸಿದ್ದತೆ ನಡೆದಿದೆ. ಈ ಸಮಯದಲ್ಲಿ ಬದಲಾವಣೆ ಸೂಕ್ತವಲ್ಲ, ಆದರೂ ಈ ವಿಚಾರದ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಶಾ ಸೂಚನೆಯಂತೆ ಇಂದು ನಡ್ಡಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಸಿಎಂ ಮಾತುಕತೆ ನಡೆಸಲಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಸಿಎಂ ಹೇಳಿದ್ದೇನು?: ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಸೇರಿದಂತೆ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಮಾತುಕತೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದು, ಅದರಂತೆ ಇಂದು ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದೇವೆ. ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ, ಸಲಹೆ ಸೂಚನೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆಯೂ ಮಾತುಕತೆ ನಡೆಸಲಾಯಿತು. ಆತುರದ ನಿರ್ಧಾರ ಬೇಡ, ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಮಾತನಾಡಿ ಎಂದಿದ್ದಾರೆ ಎಂದರು.
ಇದನ್ನೂ ಓದಿ: ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ: ಪಂಚ ರಾಜ್ಯ ಚುನಾವಣೆವರೆಗೂ ಬದಲಾವಣೆ ಬೇಡ ಎಂದ ಅಮಿತ್ ಶಾ!
ಇಂದು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ಸಮಯ ಕೇಳಿದ್ದೇನೆ. ಸಂಜೆ ಅವರು ಚುನಾವಣಾ ಪ್ರವಾಸದಿಂದ ಬಂದ ನಂತರ ಭೇಟಿಗೆ ಅನುಮತಿ ಸಿಗಬಹುದು, ಇಂದು ಅವಕಾಶ ಸಿಕ್ಕರೆ ಅವರ ಜೊತೆ ಸಭೆ ನಡೆಸುತ್ತೇನೆ. ಅವರೊಂದಿಗಿನ ಚರ್ಚೆಯ ಆಧಾರದಲ್ಲಿ ಸಂಪುಟ ಪುನರ್ ರಚನೆ, ವಿಸ್ತರಣೆ ಸೇರಿದಂತೆ ಎಲ್ಲವೂ ನಿರ್ಧಾರವಾಗಲಿದೆ ಎಂದರು.
ಆರು ತಿಂಗಳ ಸಾಧನೆ, ಕಾರ್ಯಕ್ರಮಗಳ ಕುರಿತು ಅಮಿತ್ ಶಾ ಅವರಿಗೆ ಮಾಹಿತಿ ನೀಡಿದ್ದೇನೆ. ಬಜೆಟ್ ಸಿದ್ದತೆಯ ವಿವರಗಳನ್ನು ಹಂಚಿಕೊಂಡಿದ್ದೇನೆ. ನಿಮ್ಮ ಬಜೆಟ್ ಕಾರ್ಯಕ್ರಮ ಕಾಲಮಿತಿಯಲ್ಲಿ ಆಗಬೇಕು ಎಂದು ಅಮಿತ್ ಶಾ ಸೂಚಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.