ಬೆಂಗಳೂರು: ಎಲ್ಲ ವಿಚಾರದಲ್ಲಿಯೂ ಮಹಿಳೆಯರು ಮುಂದೆ ಬರಬೇಕು, ಮುಂದಾಳತ್ವದಿಂದ ರಾಜ್ಯ ಮುನ್ನಡೆಸುವ ಸಂಕಲ್ಪ ಮಾಡಿ ಮುಂದೆ ನಡೆಯಿರಿ ನಿಮ್ಮ ಜೊತೆ ನಾವಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಯ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಂತರ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಸಿಎಂ, ನಾನು ಮಹಿಳೆಯರ ರಕ್ಷಣೆ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕಂಕಣ ಬದ್ಧವಾಗಿ ನೋಡಿಕೊಳ್ಳುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ನೆರದಿದ್ದ ಮಹಿಳೆಯರಿಗೆ ಇದೇ ವೇಳೆ, ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಿದರು.
ಈ ವೇಳೆ ಮೌನವಾಗಿದ್ದ ಸಭೆಯ ಸನ್ನಿವೇಶನ ನೋಡಿ ಶುಭಾಶಯ ಕೊರಿದ ಬಳಿಕ ಚಪ್ಪಾಳೆ ಹೊಡೆಯರಿ ಎನ್ನುತ್ತಾ ನೋಡಿ ಎಂತಹ ಕಾಲ ಬಂದಿದೆ ಚಪ್ಪಾಳೆಯನ್ನ ಹೇಳಿ ಹೊಡೆಸಿಕೊಳ್ಳಬೇಕಿದೆ. ಚಪ್ಪಾಳೆ ಹೊಡೆಯೋದು ಆರೋಗ್ಯ ಒಳ್ಳೆಯದು ಎಂದು ನಗೆ ಚಟಾಕಿ ಹಾರಿಸಿದರು.
ತಾಯಿ ಶಕ್ತಿ ದೇವತೆ: ತಾಯಿ ಎನ್ನುವಂತ ಸಂಬಂಧಕ್ಕೆ ಬಹಳ ವಿಶೇಷ ಸ್ಥಾನ ಇದೆ. 9 ತಿಂಗಳು ಹೊತ್ತು ಹೆತ್ತ ತಾಯಿ ನಿಜವಾಗಿಯೂ ವಿಶೇಷ. ಪುರುಷರಿಗೆ ಬೇರೆಯದೇ ಶಕ್ತಿ ಇದೆ. ತಾಯಿ ಶಕ್ತಿ ದೇವತೆ. ಪಾಶ್ಚಿಮಾತ್ಯ ದೇಶದಲ್ಲೂ ಬಹಳ ವಿಶೇಷವಾದ ಸ್ಥಾನ ಇದೆ. ಬಹಳ ವಿಶೇಷವಾದ ಗುಣದ ಧರ್ಮ ಮಹಿಳೆಯರಲ್ಲಿ ಇರುತ್ತದೆ. ಮಹಿಳೆಯರು ಬಹಳ ಪ್ರಾಮಾಣಿಕರು. ಇದ್ದದ್ದು ಇದ್ದಂತೆ ಮಹಿಳೆಯರು ಹೇಳುತ್ತಾರೆ. ಆದರೆ, ಪುರುಷರು ಹಾಗಲ್ಲ ಎಂದು ಸಿಎಂ ಹೇಳಿದರು.
ಹಾರ್ಡ್ ವರ್ಕಿಂಗ್, ಸೇವಿಂಗ್ಸ್ ಮಾಡುವುದರಲ್ಲಿ ಮಹಿಳೆಯರು ಮುಂದಿರುತ್ತಾರೆ. ನಮ್ಮಲ್ಲಿ ಒಂದು ಗಾದೆ ಇತ್ತು. ದುಡ್ಡೆ ದೊಡ್ಡಪ್ಪ ಅಂತ. ಆದರೆ, ಈಗ ದುಡ್ಡೆ ದೊಡ್ಡಪ್ಪ ಎನ್ನುವ ಕಾಲ ಹೋಯಿತು, ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲ ಬಂದಿದೆ. ತಾಯಂದಿರ ದುಡಿಮೆಗೆ ಬೆಲೆ ಸಿಗುತ್ತಿಲ್ಲ. ಹಳ್ಳಿಯಲ್ಲಿ ತಾಯಂದಿರ ದುಡಿಮೆಗೆ ಬೆಲೆ ಸಿಗಬೇಕು. ನನ್ನ ಬಜೆಟ್ ನಲ್ಲಿ ಹಲವಾರು ಯೋಜನೆ ಮಹಿಳಾ ಇಲಾಖೆಗೆ ಕೊಟ್ಟಿದ್ದೇನೆ. ತಾಯಿಂದರು ಹಾಗೂ ಮಕ್ಕಳ ಆರೋಗ್ಯಕ್ಕೆ ವಿಶೇಷವಾದ ಗಮನ ಕೊಟ್ಟಿದ್ದೇವೆ. ಗುಡಿ ಕೈಗಾರಿಕೆಯಿಂದ ಸ್ಟಾರ್ಟ್ ಅಪ್ ವರೆಗೂ ಮಹಿಳೆಯರಿಗೆ ಸರ್ಕಾರ ಅವಕಾಶ ಕೊಡುತ್ತಿದೆ. ಮುಂದಿನ ದೊಡ್ಡ ಆರ್ಥಿಕತೆ ಬದಲಾವಣೆ ನಮ್ಮ ತಾಯಂದಿರಿಂದ ಆಗುತ್ತದೆ ಎಂಬ ನಂಬಿಕೆ ಇದೆ ಎಂದರು.
ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಒನಕೆ ಒಬವ್ವ ಗುರುತಿಸುವ ಕೆಲಸ ಮಾಡಿದ್ದೇವೆ. ಅವರು ಪುರುಷರಷ್ಟೇ ಹೋರಾಟ ಮಾಡಿದವರು. ಎಲ್ಲ ರಂಗದಲ್ಲೂ ತಾಯಂದಿರು ಇದ್ದಾರೆ. ಇಂದು ನಮ್ಮ ಕೇಂದ್ರ ಹಣಕಾಸು ಮಂತ್ರಿ ಕೂಡ ನಿರ್ಮಲಾ ಸೀತಾರಾಮನ್. ತಾಯಿ ಹಾಗೂ ತಾಯ್ತನ ಇರುವವರಿಗೂ ಸಂಸ್ಕೃತಿ ಭೂಮಿ ಇಲೆ ಇರುತ್ತೆ. ಸ್ತ್ರೀ ಶಕ್ತಿ ಸಂಘ ಸೇರಿದಂತೆ ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ಮುಂದೆ ಬರಲಿ. ಸರ್ಕಾರ ನಿಮ್ಮ ಜೊತೆಗೆ ಬರುತ್ತದೆ. ನಾನು ಮಾತು ಕೊಡುತ್ತೇನೆ.
ನಾನು ಮಹಿಳೆಯರ ರಕ್ಷಣೆ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕಂಕಣ ಬದ್ಧವಾಗಿ ನೋಡಿಕೊಳ್ಳುತ್ತೇನೆ. ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಾಯಿ ಮಾಡುವ ಕೆಲಸ ಮಾಡುತ್ತಾರೆ. ಅವರ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಿದ್ದೇನೆ. ನೀವು ಮುಂದೆ ನಡೀರಿ ನಾವು ನಿಮ್ಮ ಜೊತೆಗೆ ಇದ್ದೇ ಇರುತ್ತೇವೆ ಎಂದರು.
ಅಮೆರಿಕಾ ಬ್ಯಾಂಕ್ ಗಿಂತ ನಮ್ಮ ಸಾಸಿವೆ ಡಬ್ಬಿ ಸ್ಟ್ರಾಂಗ್: ನಮ್ಮ ಮಹಿಳೆಯರು ನಾವು ಕೊಟ್ಟ ಹಣವನ್ನ ಕಷ್ಟ ಕಾಲದಲ್ಲಿ ಆಗಲಿದೆ ಅಂತ ಕೂಡಿಟ್ಟಿರುತ್ತಾರೆ. ಕರ್ನಾಟಕ ಯೂನಿವರ್ಸಿಟಿ ಒಂದು ಸೆಮಿನಾರ್ ನಲ್ಲಿ ಹೇಳಿದ್ದೆ. ಭಾರತದ ಜೀರಿಗೆ, ಸಾಸಿವೆ ಡಬ್ಬಿ v/s ಅಮೆರಿಕ ಬ್ಯಾಂಕ್ಸ್, ಇದರ ನಡುವೆ ನಾವು ಹೊಲಿಕೆ ಮಾಡಿದರೆ ನಮ್ಮ ದೇಶದ ಜೀರಿಗೆ ಸಾಸಿವೆ ಡಬ್ಬಿ ಸದೃಢವಾಗಿರಲಿದೆ. ಇದನ್ನ ನಾವು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು. ಅಮೆರಿಕಾ ಬ್ಯಾಂಕ್ ಗಿಂತ ನಮ್ಮ ಸಾಸಿವೆ ಡಬ್ಬಿ ಸದೃಢ ಅಂತ ಸಿಎಂ ಹೇಳುತ್ತಿದ್ದಂತೆ ನೆರದಿದ್ದ ಮಹಿಳೆಯರೆಲ್ಲ ಚಪ್ಪಾಳೆ ತಟ್ಟಿದರು.
ವೇದಿಕೆ ಏರಲು ಎಂಎಲ್ ಸಿಗೆ ಬಿಡದ ಪೊಲೀಸರು: ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಧಾನ ಪರಿಷತದ ಸದಸ್ಯ ಅರುಣ್ ಶಹಾಪುರ ಅವರನ್ನು ವೇದಿಕೆ ಮೇಲೆ ಹತ್ತದಂತೆ ಪೊಲೀಸರು ತಡೆದ ಪ್ರಸಂಗ ನಡೆಯಿತು. ಕಾರ್ಯಕ್ರಮದ ವೇದಿಕೆ ಹತ್ತುವಾಗ ತಡೆದ ಪೊಲೀಸರು ವೇದಿಕೆ ಏರಲು ಅನುಮತಿ ನಿರಾಕರಿಸಿದರು. ಅರುಣ್ ಶಹಾಪುರ ಎಂಎಲ್ಸಿ ಅಂತ ಗೊತ್ತಿಲ್ಲದೇ ತಡೆದ ಪೊಲೀಸರಿಗೆ ತಾವು ಎಂಎಲ್ಸಿ ಅಂತ ಹೇಳಿದರೂ ಕೇಳದೆ ವೇದಿಕೆ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಬಳಿಕ ಸಮಾರಂಭದಲ್ಲಿ ಕುಳಿತಿದ್ದ ಸಭಿಕರು, ಶಹಾಪುರ ಅವರ ಪಿಎ ಹೇಳಿದ ಮೇಲೆ ವೇದಿಕೆಗೆ ಬಿಟ್ಟರು. ಪೊಲೀಸರ ನಡೆಗೆ ಅರುಣ್ ಶಹಾಪುರ ಆಕ್ರೋಶ ವ್ಯಕ್ತಪಡಿಸಿ ವೇದಿಕೆ ಏರಿದರು.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದ 6 ಸಂಸ್ಥೆಗಳು, 20 ಮಹಿಳೆಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ವಸ್ತು ಪ್ರದರ್ಶನ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕಲಾಕ್ಷೇತ್ರ ಆವರಣದಲ್ಲಿ ಮಹಿಳಾ ಸಂಘಗಳಿಂದ ತಯಾರಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಉಡುಪುಗಳು, ಗೃಹೋಪಯೋಗಿ ವಸ್ತುಗಳು, ತಿನಿಸುಗಳು ಇತ್ಯಾದಿಗಳನ್ನು ಒಳಗೊಂಡ ಮಳಿಗೆಗಳನ್ನು ಸಿಎಂ ವೀಕ್ಷಿಸಿದರು.
ಇದನ್ನೂ ಓದಿ: ಸರ್ಕಾರ ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲು ಗಮನಹರಿಸಿದೆ: ಪ್ರಧಾನಿ ಮೋದಿ