ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯ ಖಂಡಿಸಿ, ವಿಧಾನಸಭೆಯಲ್ಲಿ ನಾಳೆ (ಬುಧವಾರ) ನಿರ್ಣಯ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಘೋಷಣೆ ಮಾಡಿದರು. ತಮಿಳುನಾಡು ಸರ್ಕಾರ ನಿರ್ಣಯ ವಿಚಾರವಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಎಚ್.ಕೆ.ಪಾಟೀಲ್, ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ ಸಿಎಂ, ಈ ನಿಟ್ಟಿನಲ್ಲಿ ಕಾನೂನು ತಜ್ಞರ ಸಲಹೆ ಒಡೆದು ನಾಳೆ ಸದನದಲ್ಲಿ ನಿರ್ಣಯ ತರುತ್ತೇವೆ. ವಿಳಂಬ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಮೇಕೆದಾಟು ಯೋಜನೆ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗಾಗಿ ಮಾಡಲಾಗುತ್ತಿದೆ. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆ ಇಲ್ಲ. ತಮಿಳುನಾಡು ಹೆಚ್ಚುವರಿ ನೀರನ್ನು ಬಳಕೆ ಮಾಡಿ ಯೋಜನೆ ರೂಪಿಸುತ್ತಿದ್ದಾರೆ. ಅದಕ್ಕೆ ಯಾವುದೇ ಅನುಮತಿ ಇಲ್ಲದೇ ಅಡಿಗಲ್ಲು ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ವಿಚಾರವನ್ನು ಸದನದ ಗಮನಕ್ಕೆ ತಂದರು.
ಕೇಂದ್ರಕ್ಕೂ ಒತ್ತಾಯ ಮಾಡುತ್ತೇವೆ: ಹೊಗೆನಕಲ್ ಎರಡನೇ ಹಂತವನ್ನು ತೆಗೆದುಕೊಳ್ಳುವ ಮಾತನ್ನು ತಮಿಳುನಾಡು ಸರ್ಕಾರ ಹೇಳುತ್ತಿದೆ. ಇದು ನಮ್ಮ ನೀರಿನ ಹಕ್ಕಿನ ಮೇಲೆ ಹೊಡೆತ. ಅದಕ್ಕಾಗಿ ವಿರೋಧ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ. ನಾವು ಕಾವೇರಿ ನೀರನ್ನು ಬಳಕೆ ಮಾಡುವ ಎಲ್ಲ ಸಂದರ್ಭದಲ್ಲಿ ತಮಿಳುನಾಡಿನಿಂದ ಅಡ್ಡಿಯಾಗುತ್ತಿದೆ. ನಮ್ಮ ನೀರಿನ ಹಕ್ಕು ಪಡೆದುಕೊಳ್ಳಲು ನಾವು ಪರಿತಪಿಸುವುದು ರಾಜ್ಯದ ಹಿತ ದೃಷ್ಟಿಯಿಂದ ಸರಿಯಲ್ಲ ಎಂದು ಸಿಎಂ ಅಭಿಪ್ರಾಯಪಟ್ಟರು.
ಇದನ್ನು ಪ್ರಬಲವಾಗಿ ತೆಗೆದುಕೊಂಡು ಹೋಗುತ್ತೇವೆ. ಕೇಂದ್ರಕ್ಕೂ ಒತ್ತಾಯ ಮಾಡುತ್ತೇವೆ. ನಮ್ಮ ಡಿಪಿಆರ್ ಹಾಗೂ ಪರಿಸರ ಇಲಾಖೆಯ ಅನುಮತಿ ಸಿಗಬೇಕು. ಅದರಲ್ಲಿ ಎರಡು ಮಾತಿಲ್ಲ. ತಮಿಳುನಾಡು ತಳ ಭಾಗದಲ್ಲಿ ಯೋಜನೆ ಮಾಡುತ್ತಿದ್ದಾರೆ. ಅದಕ್ಕೆ ನೀರಿನ ಹಂಚಿಕೆ ಇಲ್ಲ. ತಾಂತ್ರಿಕ ಮಾಹಿತಿಯನ್ನು ಈ ಬಗ್ಗೆ ಪಡೆದುಕೊಳ್ಳುತ್ತೇವೆ ಎಂದರು.
ತಮಿಳುನಾಡು ನಿರ್ಣಯ ಕಾನೂನು ಬಾಹಿರ. ನಮ್ಮ ಹಕ್ಕಿನ ಮೇಲೆ ಗದಾ ಪ್ರಹಾರ ಹಾಗೂ ಒಕ್ಕೂಟ ವ್ಯವಸ್ಥೆ ವಿರುದ್ಧವಾಗಿದೆ. ನಮ್ಮ ನಿಲುವು ಈ ಬಗ್ಗೆ ಸ್ಪಷ್ಟವಾಗಿದೆ. ನಾಳೆ ನಿರ್ಣಯ ತರುತ್ತೇವೆ. ಕಾನೂನು ಸಲಹೆಗಾರರ ಜತೆ ಇಂದು ಸಂಜೆ ಚರ್ಚೆ ನಡೆಸುತ್ತೇನೆ. ಅವರ ಸಲಹೆ ಪಡೆದು ಸದನದ ಮುಂದೆ ಸ್ಪಷ್ಟವಾದ ನಿಲುವು ಹೇಳುತ್ತೇವೆ. ಯೋಜನೆ ಕಾರ್ಯಗತಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಮೇಕೆದಾಟು ವಿಚಾರವಾಗಿ ನಮ್ಮ ನಿಲುವು ಸ್ಪಷ್ಟ. ಯೋಜನೆಯನ್ನು ನಾವು ಮಾಡೇ ತೀರುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಭಗವದ್ಗೀತೆ, ಭಾಷೆ, ದೇಶ, ಧರ್ಮ ಬೇಕಾಗಿದೆ, ಅದರ ಬಗ್ಗೆ ಮಾತಾಡಿದ್ರೆ ಪ್ರಚಾರ ಸಿಗುತ್ತೆ : ಜನರ ಮನಸ್ಥಿತಿಗೆ ಹೆಚ್ಡಿಕೆ ಅಸಮಾಧಾನ