ಬೆಂಗಳೂರು: ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವ ಬೆನ್ನಲ್ಲಿಯೇ ಸುರತ್ಕಲ್‌ನಲ್ಲಿ ಫಾಜಿಲ್ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ಸಾಕ್ಷಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ಸಂಬಂಧ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗಟ್ಟದೆ, ಅವರ ದುಷ್ಕೃತ್ಯವನ್ನು ಕ್ರಿಯೆಗೆ-ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇದಕ್ಕೆ ಹೊಣೆಗಾರರು. ಅವರು ಜಿಲ್ಲೆಯಲ್ಲಿರುವಾಗಲೇ ನಡೆದಿರುವ ಹತ್ಯೆ ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ ಎಂದು ಕಿಡಿಕಾರಿದ್ದಾರೆ.
ಅಸಮರ್ಥ ಗೃಹ ಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಾಗಿ ದುಷ್ಕರ್ಮಿಗಳು ರಾಜಾರೋಷವಾಗಿ ಹತ್ಯಾಕಾಂಡವನ್ನು ಮುಂದುವರಿಸಿದ್ದಾರೆ. ಸಿಎಂ ತಕ್ಷಣ ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ, ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಬಹುದು. ಕೊಲೆಗಡುಕರು ಯಾವುದೇ ಪಕ್ಷ, ಪಂಥ, ಜಾತಿ, ಧರ್ಮದವರಾಗಿದ್ದರೂ ಅವರನ್ನು ಪತ್ತೆ ಹಚ್ಚಿ ಜೈಲಿಗಟ್ಟಬೇಕಾಗಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ, ಹೆಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಕುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ - ಕೇರಳದ ಸಂಪರ್ಕದ ಬಗ್ಗೆ ಪ್ರಾಥಮಿಕ ಮಾಹಿತಿ, ಆ ರಾಜ್ಯದ ಪೊಲೀಸರ ಜೊತೆಗೂ ತನಿಖೆ: ಸಿಎಂ