ಬೆಂಗಳೂರು : ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾವುದೇ ಬೇಧ-ಭಾವವಿಲ್ಲದೇ ನಾವು ಕೆಲಸ ಮಾಡುತ್ತೇವೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ. ಸಂಘಟನೆಗಳು, ಸಂಘ-ಸಂಸ್ಥೆಗಳ ಜೊತೆ ಮಾತುಕತೆ ನಡೆಸಿ ನ್ಯಾಯಾಲಯಗಳು ನೀಡಿರುವ ತೀರ್ಪನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಆಜಾನ್ ವಿವಾದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸಿಎಂ ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ಹೇಳಿಕೆಗಳಿಂದ ಸಮಸ್ಯೆಗಳ ಪರಿಹಾರ ಆಗುವುದಿಲ್ಲ. ಅವುಗಳ ಬಗ್ಗೆ ಈಗಾಗಲೇ ಹಲವಾರು ವಿಚಾರಗಳು ಬಂದಿವೆ. ಇವೆಲ್ಲ ಹಿಂದಿನಿಂದ ಬಂದಿರುವ ವಿಚಾರಗಳು. ಈಗ ಹೊಸದಾಗಿ ಬಂದಿಲ್ಲ. ಎಲ್ಲವು ಹಳೆಯ ಆದೇಶಗಳೇ ಆಗಿವೆ. ಹೈಕೋರ್ಟ್ನ ತೀರ್ಪುಗಳು ಕೂಡ ಹಳೆಯವೇ. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ. ಎಲ್ಲವನ್ನು ಗಮನದಲ್ಲಿರಿಸಿಕೊಂಡು, ಯಾವುದೇ ಸಮಾಜ ಆಗಲಿ, ಯಾವುದೇ ಸಂಘಟನೆ ಆಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳದೇ ಶಾಂತಿ-ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲಾ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದರು.
ಎಲ್ಲರನ್ನು ವಿಶ್ವಾಸಕ್ಕೆ ಪಡೆಯುತ್ತೇವೆ : ಆಜಾನ್ ಕುರಿತು ಈಗಾಗಲೇ ಹೈಕೋರ್ಟ್ ಆದೇಶವಿದೆ. ಯಾಕೆ ಕೋರ್ಟ್ ತೀರ್ಪು ಅನುಷ್ಠಾನಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದೆ. ಆಜಾನ್‌ಗೆ ಡೆಸಿಬಲ್ ಪ್ರಮಾಣ ನಿಗದಿಗೊಳಿಸಿದೆ. ಡೆಸಿಬಲ್ ತಪಾಸಣೆ ಮಾಡುವ ಯಂತ್ರ ಖರೀದಿ ಮಾಡುವ ಹಾಗೂ ಹೈಕೋರ್ಟ್ ಆದೇಶಗಳನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮಾಡಬೇಕಿರುವ ಕೆಲಸ ಇದು. ಹಲವಾರು ಸಂಘಟನೆಗಳೊಂದಿಗೆ, ಪೊಲೀಸ್ ಠಾಣೆ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಈಗಾಗಲೇ ಸಭೆಗಳನ್ನು ಮಾಡಿದ್ದೇವೆ. ಮುಂದೆಯೂ ಸಭೆಗಳನ್ನು ಮಾಡಿ ಕ್ರಮಕೈಗೊಳ್ಳುತ್ತೇವೆ ಎಂದರು.
ಹೆಚ್ಡಿಕೆ ಆರೋಪ ಆಧಾರ ರಹಿತ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ಸರ್ಕಾರ ಆರ್‌ಎಸ್‌ಎಸ್ ರಿಮೋಟ್ ಕಂಟ್ರೋಲ್ ಎನ್ನುವ ಆಧಾರ ರಹಿತ ಆರೋಪಗಳ ಬಗ್ಗೆ ನಾನು ಉತ್ತರ ಕೊಡುವುದಿಲ್ಲ ಎಂದರು.
ಇದನ್ನೂ ಓದಿ: ಇಂದು ಸಿಎಂ ದೆಹಲಿ ಪ್ರವಾಸ : ನೀರಾವರಿ ಯೋಜನೆಗಳ ಚರ್ಚೆ, ಸಂಪುಟ ವಿಸ್ತರಣೆ ಬಗ್ಗೆ ಬೊಮ್ಮಾಯಿ ಹೇಳಿದ್ದೇನು?
ಸರ್ಕಾರ ಸಂಘ ಪರಿವಾರದ ನಿಯಂತ್ರಣದಲ್ಲಿದೆ. ಇದರ ವಿರುದ್ಧ ಏಪ್ರಿಲ್ 10ರಿಂದ ಪ್ರತಿಭಟನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಇದು ಆಧಾರರಹಿತ ಆರೋಪವಾಗಿದೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದೆ. ಕರ್ನಾಟಕ ಜನತೆಯ ಆಶೀರ್ವಾದವಿದೆ. ಈ ಒಂದು ವಿಚಾರವನ್ನು ಹಿಡಿದುಕೊಂಡು ನಾವು ಆಡಳಿತ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಆಡಳಿತ ಕೊಡುವ ಸಂಪೂರ್ಣ ವಿಶ್ವಾಸವಿದೆ ಎಂದರು.
ತೆಲಂಗಾಣ ಸಚಿವರ ಟ್ವೀಟ್ ಹಾಸ್ಯಾಸ್ಪದ : ತೆಲಂಗಾಣ ಸಚಿವ ಕೆಟಿ ರಾಮರಾವ್ ಟ್ವೀಟ್ ಹಾಸ್ಯಾಸ್ಪದವಾಗಿದೆ. ದೇಶ ಮಾತ್ರವಲ್ಲ ಇಡೀ ಜಗತ್ತಿನ ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಅತಿ ಹೆಚ್ಚು ಸ್ಟಾರ್ಟ್ ಅಪ್ಗಳು ಬೆಂಗಳೂರಿನಲ್ಲಿವೆ. ಅತಿ ಹೆಚ್ಚು ವಿದೇಶಿ ಹೂಡಿಕೆ ಬೆಂಗಳೂರಿನಲ್ಲಿದೆ. ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಆರ್ಥಿಕತೆ ಉತ್ತಮ ಮಟ್ಟದಲ್ಲಿದೆ. ಹಾಗಾಗಿ, ಬೆಂಗಳೂರನ್ನು ಹೈದರಾಬಾದ್ಗೆ, ಕರ್ನಾಟಕವನ್ನು ತೆಲಂಗಾಣಕ್ಕೆ ಹೋಲಿಸುವುದು ಹಾಸ್ಯಾಸ್ಪದ ಎಂದು ಹೈದರಾಬಾದ್ಗೆ ಉದ್ಯಮಿಗಳನ್ನು ಆಹ್ವಾನಿಸಿ ತೆಲಂಗಾಣ ಸಚಿವ ರಾಮರಾವ್ ಟ್ವೀಟ್ ಮಾಡಿರುವುದಕ್ಕೆ ಸಿಎಂ ತಿರುಗೇಟು ನೀಡಿದ್ದಾರೆ.