ಬೆಂಗಳೂರು : ರಾಜ್ಯದಲ್ಲಿ 3ನೇ ಅಲೆ ತಗ್ಗಿ ಕೊರೊನಾ ಸೋಂಕು ಇನ್ನೇನು ಕಡಿಮೆಯಾಯಿತು ಎನ್ನುವಾಗಲೇ 4ನೇ ಅಲೆಯ ಆತಂಕ ಶುರುವಾಗಿದೆ. ಎರಡಂಕಿಯಿಂದ ಮೂರಂಕಿಗೆ ಸೋಂಕಿತರ ಸಂಖ್ಯೆ ಜಿಗಿದಿದೆ. ಹೀಗಾಗಿ, ಕೋವಿಡ್ 4ನೇ ಅಲೆ ಭೀತಿ ಹಿನ್ನೆಲೆ ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಧ್ಯಾಹ್ನ 12.30ಕ್ಕೆ ಮಹತ್ವದ ಸಭೆ ನಡೆಯಲಿದೆ.
4ನೇ ಅಲೆ ನಿಯಂತ್ರಣಕ್ಕೆ ಕೆಲ ನಿಯಮಗಳನ್ನ ಜಾರಿ ಮಾಡುವ ಸಾಧ್ಯತೆ ಇದೆ. ಹಾಗೇ 27ರಂದು ಪ್ರಧಾನಿ ಜತೆ ಸಭೆ ಇದೆ. ಹೀಗಾಗಿ, ಇಂದು ಪೂರ್ವಭಾವಿ ಸಭೆ ನಡೆಸಲಿದ್ದು, ರಾಜ್ಯದಲ್ಲಿ ಕೆಲ ನಿಯಮ ತರುವ ಸಾಧ್ಯತೆ ಇದೆ. ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ನಿರ್ಬಂಧ ವಿಧಿಸದೆ ಇರಲು ಸರ್ಕಾರದ ನಿರ್ಧರಿಸಿದೆ. ಪ್ರಾರಂಭಿಕ ಹಂತದಲ್ಲಿ ಕೆಲವು ನಿಯಮಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಯಾವ ನಿಯಮಗಳು ಜಾರಿ?:
- ಟೆಸ್ಟಿಂಗ್ ಪ್ರಮಾಣ ಸದ್ಯ ಕಡಿಮೆ ಇದೆ. ಮತ್ತೆ ಟೆಸ್ಟಿಂಗ್ ಪ್ರಮಾಣ ಹೆಚ್ಚಳ ಮಾಡಬಹುದು.
- ಮೆಜೆಸ್ಟಿಕ್, ಮಾರುಕಟ್ಟೆ ಸೇರಿದಂತೆ ಪ್ರಮುಖ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಟೆಸ್ಟಿಂಗ್ ಕ್ಯಾಂಪ್ ಪುನಾರಂಭ ಮಾಡುವುದು.
- ಅಂತಾರಾಜ್ಯ ಗಡಿಭಾಗದಲ್ಲಿ ತಪಾಸಣೆ ಕೇಂದ್ರ ಪ್ರಾರಂಭ ಮಾಡುವುದು.
- ವಿಮಾನ ನಿಲ್ದಾಣದಲ್ಲಿ ಮತ್ತೆ ಕಠಿಣ ನಿಯಮ ಜಾರಿ. ಟೆಸ್ಟಿಂಗ್ ಪ್ರಮಾಣ, ಸ್ಕ್ರೀನಿಂಗ್ ವ್ಯವಸ್ಥೆ ಮತ್ತಷ್ಟು ಹೆಚ್ಚಳ ಸಾಧ್ಯತೆ.
- ಮಾಸ್ಕ್ ಕಡ್ಡಾಯ ಮಾಡಬಹುದು.
- ಮಾಸ್ಕ್ ದಂಡ ಪ್ರಯೋಗ ಮತ್ತೆ ಪ್ರಾರಂಭ ಮಾಡುವುದು.
- ಬೂಸ್ಟರ್ ಡೋಸ್ ಅಭಿಯಾನಕ್ಕೆ ಹೆಚ್ಚು ಜಾಗೃತಿ ಮೂಡಿಸುವುದು.
- ಕೇಸ್ ಪತ್ತೆಯಾದ ಕೂಡಲೇ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದು.
- ಕಂಟೇನ್ಮೆಂಟ್ ಝೋನ್ ನಿಯಮ ಮತ್ತೆ ಜಾರಿ.
- ಸೋಂಕು ಹೆಚ್ಚಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ ಟೆಸ್ಟ್ ಮಾಡಿ ಕ್ವಾರಂಟೈನ್ ನಿಯಮ ಜಾರಿ ಮಾಡುವುದು ಕುರಿತು ಚರ್ಚೆ ನಡೆಯಲಿದೆ.
ಸಭೆಗೂ ಮುನ್ನ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿರುತ್ತಾರೆ. ನಾನು ಕೂಡ ಎರಡು ವಾರಗಳಿಂದ ನಮ್ಮ ಇಲಾಖೆ ಅಧಿಕಾರಿಗಳ ಜತೆ ಸತತವಾಗಿ ಸಂಪರ್ಕದಲ್ಲಿದ್ದೇನೆ.
4ನೇ ಅಲೆ ಹೇಗೆ ರಿಯಾಕ್ಟ್ ಮಾಡುತ್ತದೆ?, ಹೊಸ ಪ್ರಬೇಧ ಏನಾದ್ರು ಇದೆಯಾ? ಅಂತಾ ಇಂದಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸಭೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ 4ನೇ ಅಲೆ ಎದುರಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ತಜ್ಞರ ಮಾಹಿತಿ ಪಡೆಯಲಿದ್ದೇವೆ ಎಂದರು.
ಒಮಿಕ್ರಾನ್ ಸಬ್ ವೇರಿಯಂಟ್ ಕಂಡು ಬಂದಿಲ್ಲ: ನಮ್ಮ ರಾಜ್ಯದಲ್ಲಿ ಒಮಿಕ್ರಾನ್ ಸಬ್ ವೇರಿಯಂಟ್ ಕಂಡು ಬಂದಿಲ್ಲ. ಈಗಾಗಲೇ ಲ್ಯಾಬ್ನಿಂದ ಕೇಂದ್ರಕ್ಕೆ ಮಾಹಿತಿ ರವಾನೆ ಆಗಿದೆ. ಕೇಂದ್ರದಿಂದ ಇನ್ನು ಅಧಿಕೃತವಾಗಿ ಯಾವುದೇ ಮಾಹಿತಿ ಕೊಟ್ಟಿಲ್ಲ. ಹೀಗಾಗಿ, ರಾಜ್ಯದಲ್ಲಿ ಹೊಸ ತಳಿ ಪತ್ತೆ ಬಗ್ಗೆ ಆತಂಕ ಇಲ್ಲ ಎಂದರು.
ಇನ್ನು ರಾಜ್ಯದಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಳ ವಿಚಾರವಾಗಿ ಮಾತನಾಡಿದ ಸಚಿವರು, ಪಾಸಿಟಿವಿಟಿ ದರದ ಆಧಾರದಲ್ಲಿ ಟೆಸ್ಟಿಂಗ್ ಜಾಸ್ತಿ ಮಾಡುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ನಾವು ಟೆಸ್ಟಿಂಗ್ ಮಾಡುತ್ತಿದ್ದೇವೆ. ಅನಗತ್ಯ ಟೆಸ್ಟ್ ಬೇಕಾಗಿಲ್ಲ. ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿದೆ. ಅಲ್ಲಿನ ಎಲ್ಲಾ ಮಾಹಿತಿ ಪಡೆದು ರಾಜ್ಯದ ಕ್ರಮಗಳ ಬಗ್ಗೆ ಇಂದು ಚರ್ಚೆ ಮಾಡುತ್ತೇವೆ ಎಂದರು.
ಏರ್ಪೋರ್ಟ್ನಲ್ಲಿ ಟಫ್ ರೂಲ್ಸ್ : ಕೊರೊನಾ 4ನೇ ಅಲೆ ಭೀತಿ ಹಿನ್ನೆಲೆ ಈಗಾಗಲೇ ಏರ್ಪೋರ್ಟ್ಗಳಲ್ಲಿ ಕಠಿಣ ನಿಯಮ ಜಾರಿ ಮಾಡಲಾಗಿದೆ. ಸೋಂಕು ಹೆಚ್ಚು ಇರುವ 8 ದೇಶಗಳಿಂದ ಬರುವ ಪ್ರಯಾಣಿಕರಿಗೆ ನಿಯಮ ಜಾರಿ ಮಾಡಲಾಗಿದೆ. ಏರ್ಪೋರ್ಟ್ನಲ್ಲಿ ಈ ಹಿಂದೆ ಇದ್ದ ಮಾರ್ಗಸೂಚಿಗಳೇ ಮುಂದುವರಿಕೆ ಆಗುತ್ತವೆ ಎಂದರು.
ಔಷಧಿ ಕೊರತೆ : ರಾಜ್ಯದಲ್ಲಿ ಔಷಧಿ ಕೊರತೆ ವಿಚಾರವಾಗಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಔಷಧಿ ಕೊರತೆ ಇಲ್ಲ. ಈಗಾಗಲೇ DHO,THOಗಳ ಅಕೌಂಟ್ಗೆ ಹಣ ಹಾಕಿದ್ದೇವೆ. ಸ್ಥಳೀಯವಾಗಿ ಅವಶ್ಯಕವಾದ ಔಷಧಿಗಳನ್ನ ಖರೀದಿಗೆ ಅನುಮತಿ ಕೊಟ್ಟಿದ್ದೇವೆ. ಅವರು ಔಷಧಿ ಖರೀದಿ ಮಾಡಬಹುದು ಎಂದು ತಿಳಿಸಿದರು.
5 ವರ್ಷ ಮೇಲ್ಪಟ್ಟವರಿಗೂ ಲಸಿಕೆ : ಇತ್ತೀಚೆಗೆ ಜನರು ಮಾಸ್ಕ್ ಧರಿಸುತ್ತಿಲ್ಲ. ಜತೆಗೆ ಅನೇಕ ಜನರು 2ನೇ ಡೋಸ್ ಲಸಿಕೆ ಕೂಡ ಪಡೆದಿಲ್ಲ. 2ನೇ ಡೋಸ್ ಪಡೆದಿಲ್ಲದವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಜತೆಗೆ ಬೂಸ್ಟರ್ ಡೋಸ್ ಕೂಡ ಪಡೆಯಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಪೋಷಕರು ಲಸಿಕೆ ಕೊಡಿಸಬೇಕು. ಆದಷ್ಟು ಬೇಗ 5 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಬರಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಏರಿಕೆಯತ್ತ ಕೋವಿಡ್ : ಆರೋಗ್ಯ ಇಲಾಖೆಯಿಂದ ಇಂದು ಪರಿಶೀಲನಾ ಸಭೆ