ಬೆಂಗಳೂರು: ನಾವು ಯಾವುದೇ ರಾಜಕೀಯ ದ್ವೇಷ, ಅನುದಾನ ತಾರತಮ್ಯ ಮಾಡಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಹೊಳೆನರಸೀಪುರ ಪುರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಹೆಚ್.ಡಿ ರೇವಣ್ಣ ಅಸಮಾಧಾನಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದರು.
ಹೊಳೆನರಸೀಪುರ ಪುರಸಭೆಗೆ ಎಸ್ಎಸ್ಇ ಯೋಜನೆಯಡಿ ಅನುದಾನ ಮಂಜೂರಾಗಿದೆ. 2019 ರಲ್ಲಿ 18 ಕೋಟಿ ವಿಶೇಷ ಅನುದಾನ ಪಡೆದುಕೊಂಡಿದ್ದಾರೆ. 2019 ರಲ್ಲಿ ನೆರೆ ಬಂದಾಗ ಯಾವ ನಗರಕ್ಕೂ ಅನುದಾನ ಒದಗಿಸಲು ಸಾಧ್ಯವಾಗಿರಲಿಲ್ಲ. ನಾವು ಯಾವುದಕ್ಕೂ ತಾರತಮ್ಯ ಮಾಡಲಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಹೊಳೆನರಸೀಪುರ ನಮಗೆ ಆತ್ಮೀಯ ಆಗಿರುವ ಕ್ಷೇತ್ರ. ನಾವು ರಾಜಕೀಯ ದ್ವೇಷ ಮಾಡಲಿಲ್ಲ. ಹೊಳೆನರಸೀಪುರದಲ್ಲಿ ಸ್ಥಗಿತವಾಗಿರುವ ಕಾಮಗಾರಿಗಳಿಗೆ ಹಣ ಮಂಜೂರು ಮಾಡ್ತೇವೆ. ರೇವಣ್ಣ ಅವರು ಯಾವ ಸ್ಟೈಲ್ನಲ್ಲಿ ಅನುದಾನ ಕೇಳ್ತಾರೆ ಅಂತ ನಮಗೂ ಗೊತ್ತಿದೆ. ಎಲ್ಲ ಸರ್ಕಾರಗಳು ಇರುವಾಗಲೂ ರೇವಣ್ಣ ಇದೇ ಸ್ಟೈಲ್ನಲ್ಲಿ ಹಣ ಕೇಳೋದು ಎಂದು ಕಾಲೆಳೆದರು.
ಇದಕ್ಕೂ ಮುನ್ನ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ ರೇವಣ್ಣ, ಅನುದಾನದಲ್ಲಿ ತಾರತಮ್ಯ ಮಾಡುವ ಮೂಲಕ ರಾಜಕೀಯ ದ್ವೇಷ ಮಾಡ್ತಿದೀರಿ. ರಾಜಕೀಯ ದ್ವೇಷ ಮಾಡ್ತೀರಿ ಅಂದ್ರೆ ಅದಕ್ಕೆ ನಾವೂ ರೆಡಿ ಇದೀವಿ. ಅಭಿವೃದ್ಧಿ ಸ್ಥಗಿತ ಆಗಿದೆ. ಸದನದಲ್ಲಿ ಚರ್ಚೆಗೆ ಅವಕಾಶ ಕೊಡಿ ಎಂದು ಸವಾಲು ಹಾಕಿದರು.
ಇದಕ್ಕೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ನಾವೂ ಚರ್ಚೆಗೆ ರೆಡಿ ಇದ್ದೇವೆ. ಯಾರ್ಯಾರ ಕಾಲದಲ್ಲಿ ಏನೆನಾಗಿದೆ ಅಂತ ಮಾಹಿತಿ ತೆಗೆದು ಚರ್ಚೆ ಮಾಡೋಣ ಎಂದು ಪ್ರತಿಸವಾಲು ಹಾಕಿದರು.
ರಾಜಕಾಲುವೆಯಲ್ಲಿ ಹೂಳನ್ನು ಸಂಪೂರ್ಣವಾಗಿ ತೆಗೆಯಲಾಗುವುದು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜಕಾಲುವೆಯಲ್ಲಿ 2022 ರ ಮಾರ್ಚ್ ಒಳಗೆ ಹೂಳನ್ನು ಸಂಪೂರ್ಣವಾಗಿ ತೆಗೆಯಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ರಾಮಲಿಂಗಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾಲುವೆಯಲ್ಲಿ ಸಂಗ್ರಹಿಸಿರುವ ಹೂಳನ್ನು ಕಳೆದ ಜನವರಿಯಲ್ಲೇ ತೆಗೆದು ಹಾಕಬೇಕಿತ್ತು. ವಿವಿಧ ಕಾರಣಗಳಿಂದ ವಿಳಂಬವಾಗಿದೆ. ಮುಂದಿನ ಮಾರ್ಚ್ ವೇಳೆಗೆ ರಾಜಕಾಲುವೆಯಲ್ಲಿರುವ ಹೂಳನ್ನು ತೆಗೆದು ಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಪರಿಷತ್ ನಲ್ಲಿ ಪರಿಚಯದ ಪ್ರಸಂಗ : ಅನಾಥ ಮಕ್ಕಳು ಎದ್ದು ನಿಂತು ಹೇಳಿದಂತಾಗುತ್ತಿದೆ ; ಸಚಿವರ ಕಾಲೆಳೆದ ಇಬ್ರಾಹಿಂ
ವಿಜಯನಗರ ವ್ಯಾಪ್ತಿಯ ವಾರ್ಡ್ ಸಂಖ್ಯೆ 123ರ ವೃಷಭಾವತಿ ಮುಖ್ಯಕಾಲುವೆಯಲ್ಲಿ ಮಳೆ ನೀರು ಮಾಗಡಿ ಮುಖ್ಯರಸ್ತೆಯಿಂದ ಚೋಳರಪಾಳ್ಯ ಮೂಲಕ ಪಾದರಾಯನಪುರ ಮೂಲಕ ಹಾದು ಹೋಗಿದೆ. ರಾಜಕಾಲುವೆಯಲ್ಲಿ ಬಿಡಬ್ಲ್ಯೂಎಸ್‍ಎಸ್‍ಬಿಯವರು ಒಳಚರಂಡಿ ಪೈಪ್ ಅಳವಡಿಸುತ್ತಿರುವುದರಿಂದ ಹೂಳು ತೆಗೆಯುವ ಕಾಮಗಾರಿ ವಿಳಂಬವಾಗಿದೆ ಎಂದರು.
ಬಿಡಬ್ಲ್ಯೂಎಸ್‍ಎಸ್‍ಬಿಯು ಒಳಚರಂಡಿ ಪೈಪ್ ಅಳವಡಿಸುತ್ತಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಅಕ್ಕಪಕ್ಕದ ನಿವಾಸಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಅಮೃತ್ ಯೋಜನೆಯಡಿ ಎಸ್4ಬಿ ಪ್ಯಾಕೇಜ್ ಯೋಜನೆಯಡಿಯಲ್ಲಿ ಗಣಪತಿನಗರದಿಂದ ಕೆಇಬಿ ಸಬ್‍ಸ್ಟ್ರೇಷನ್‍ವರೆಗೂ 600ಎಂಎಂನಿಂದ 1400 ಎಂಎಂ ವ್ಯಾಸದ ಆರ್‍ಸಿಸಿ ಕೊಳವೆ ಮಾರ್ಗವನ್ನು ಅಳವಡಿಸಲಾಗುತ್ತಿದೆ. ಈ ಕಾಮಗಾರಿಯನ್ನು 2022ರ ಮಾರ್ಚ್ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.