ಬೆಂಗಳೂರು : ಮಾಜಿ ಸಿಎಂ ಎಸ್ ಆರ್ ಬೊಮ್ಮಾಯಿ 98ನೇ ಜನ್ಮ ದಿನಾಚರಣೆ ಪ್ರಯಕ್ತ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಂದೆಯ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪ ನಮನ ಸಲ್ಲಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಸಿಎಂ, 'ನನ್ನ ಪ್ರೇರಣಾ ಶಕ್ತಿ ಹಾಗೂ ನನಗೆ ಆದರ್ಶ ಪ್ರಾಯರಾಗಿದ್ದ ನನ್ನ ತಂದೆಯವರಾದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ 98ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಕ್ತಿ ಪೂರ್ವಕ ನಮನ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಕೇವಲ ಜನಪರ ಕಾಳಜಿಯಿಂದಲೇ ರಾಜಕೀಯ ಪ್ರವೇಶಿಸಿದ ಅಪರೂಪದ ಮುತ್ಸದ್ಧಿ ಎಸ್. ಆರ್ ಬೊಮ್ಮಾಯಿ, ಕೇಂದ್ರ ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ಮೌಲ್ಯಾಧಾರಿತ ರಾಜಕಾರಣಕ್ಕೆ ಒಂದು ಮಾದರಿ ಎಂಬಂತೆ ಬಾಳಿ ಬದುಕಿ, ಆದರ್ಶ ನಾಯಕರಾಗಿದ್ದಾರೆ ಎಂದು ಸ್ಮರಿಸಿದ್ದಾರೆ.
ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ : ಇದೇ ವೇಳೆ ಸಿಎಂ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 40ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿನ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಮಾಜಿ ಶಾಸಕ ಲೇಹರ್ ಸಿಂಗ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ದೇವರಾಜ ಅರಸು ಕುಟುಂಬದ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಅತಿ ಹೆಚ್ಚು ರೈತರು ಭೂ ಒಡೆಯರಾಗಲು ದೇವರಾಜ ಅರಸು ಅವರ ಭೂ ಸುಧಾರಣೆ ಕಾನೂನು ಕಾರಣ. ತತ್ವ, ಆದರ್ಶಗಳಿಗೆ ಗಟ್ಟಿಯಾಗಿ ನಿಂತು ಬಡವರ ಪರ ಕಾರ್ಯಕ್ರಮ ರೂಪಿಸಿದವರಾಗಿದ್ದಾರೆ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿ, ಅದನ್ನು ಅನುಷ್ಠಾನಗೊಳಿಸಿದ ಏಕೈಕ ನಾಯಕ ಅರಸು ಅವರಾಗಿದ್ದರು. ಅವರದ್ದು ಸುಂದರ ಹಾಗೂ ಎಲ್ಲರನ್ನು ಆಕರ್ಷಿಸುವ ವ್ಯಕ್ತಿತ್ವ. ರಾಜ್ಯದಲ್ಲಿ ಅಮೂಲಾಗ್ರ ಅಭಿವೃದ್ಧಿ ಮಾಡಿರುವ ನಾಯಕರು ಎಂದು ಸಿಎಂ ಸ್ಮರಿಸಿದರು.
ಇದನ್ನೂ ಓದಿ: ಕೋವಿಡ್ ಹೆಚ್ಚಳ ಹಿನ್ನೆಲೆ ವರದಿ ಪರಿಶೀಲಿಸಿ ಕ್ರಮ: ಗಾಬರಿ ಪಡುವ ಅಗತ್ಯವಿಲ್ಲ ಎಂದ ಸಿಎಂ