ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಬುಲಾವ್ ಬರುತ್ತಿದ್ದಂತೆ ನವದೆಹಲಿಗೆ ತೆರಳಿ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆರ್ ಟಿ ನಗರ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ವಿಚಾರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತುಕತೆ ನಡೆದಿದೆ. ದೆಹಲಿಗೆ ತೆರಳಿದ ನಂತರ ಮಾತನಾಡಿ ಹೇಳುತ್ತೇವೆ ಎಂದಿದ್ದಾರೆ. ವರಿಷ್ಠರಿಂದ ಕರೆ ಬರುತ್ತಿದ್ದಂತೆ ದೆಹಲಿಗೆ ತೆರಳಿ ಮಾತುಕತೆ ನಡೆಸುತ್ತೇನೆ ಎಂದರು.
ಮಾಲೂರು ಮಂಜುನಾಥ್ ಗೌಡ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಬಿಜೆಪಿಗರ ವಿರೋಧ ವಿಚಾರದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಜಿಲ್ಲಾ ಘಟಕ, ಸ್ಥಳೀಯ ಮುಖಂಡರು ತೀರ್ಮಾನ ಮಾಡುತ್ತಾರೆ. ಬಿಜೆಪಿ ಪರವಾದ ಬದಲಾವಣೆಗಳಾಗುತ್ತಿವೆ. ಅದರ ಪ್ರಭಾವದಿಂದ ಹಲವು ಕ್ಷೇತ್ರಗಳಲ್ಲಿ ನಮಗೆ ಗೆಲ್ಲುವ ಅವಕಾಶಗಳು ಬರುತ್ತಿವೆ. ನಮ್ಮ ಪಕ್ಷದ ಸಿದ್ಧಾಂತಗಳನ್ನು ನಂಬಿ ಬರುವವರ ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದೆ. ಇಂದು ಕೆಲವರ ಸೇರ್ಪಡೆ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನ ಪಕ್ಷಕ್ಕೆ ಸೇರುವವರಿದ್ದಾರೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಪ್ರಭಾವಿಗಳ ಕೈವಾಡ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಯಾರ್ಯಾರು ಏನೇನು ಹೇಳಿಕೆ ಕೊಡ್ತಾರೋ ಅದಕ್ಕೆ ಬದ್ಧವಾಗಿ ದಾಖಲೆ ಕೊಡಲಿ. ದಾಖಲೆ ಕೊಟ್ಟರೆ ತನಿಖೆ ನಡೆಸಲಾಗುತ್ತದೆ ಎಂದರು.
ವಿಧಾನಸೌಧ ವ್ಯಾಪಾರ ಸೌಧ ಆಗಿದೆ ಎಂಬ ಪ್ರಿಯಾಂಕ್ ಖರ್ಗೆ ಟ್ವೀಟ್ಗೆ ಟಾಂಗ್ ನೀಡಿದ ಸಿಎಂ, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಪ್ರಿಯಾಂಕ್ ಖರ್ಗೆ ಮೂಲ ಕಾಂಗ್ರೆಸಿಗರು. ಹಾಗಾಗಿ ಅವರಿಗೆ ಭ್ರಷ್ಟಾಚಾರ ಕರಗತ ಆಗಿದೆ. ನಾವು ಪ್ರಿಯಾಂಕ್ ಖರ್ಗೆಯಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದರು.
ಇದನ್ನೂ ಓದಿ: ಪ್ರವಾಸ ಮುಗಿಸಿ ಹೊರಟ ಅಮಿತ್ ಶಾ ಸಿಎಂ ಬೊಮ್ಮಾಯಿಗೆ ಹೇಳಿದ್ದೇನು?