ಬೆಂಗಳೂರು: ಟೋಯಿಂಗ್, ಟ್ರಾಫಿಕ್ನಿಂದ ಜನರಿಗೆ ಆಗುತ್ತಿರುವ ಕಿರಕಿರಿ ತಪ್ಪಿಸಲು ಏನೆಲ್ಲಾ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಚರ್ಚೆ ನಡೆಸಿ ಇಂದು ಸಂಜೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂದು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡುತ್ತಿದ್ದೇನೆ. ಸಂಜೆವರೆಗೂ ನಿರಂತರ ಸಭೆಗಳಿವೆ. ಸಂಜೆ ಬೆಂಗಳೂರು ಪೊಲೀಸ್ ಕಮಿಷನರ್ ಜತೆ ಸಭೆ ನಡೆಸಲಿದ್ದು, ಈ ವೇಳೆ ಟೋಯಿಂಗ್ ಸೇರಿದಂತೆ ಟ್ರಾಫಿಕ್ ಕಿರಿಕಿರಿ ಬಗ್ಗೆ ಚರ್ಚೆ ನಡೆಸಿ, ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಶನಿವಾರ ಇಂದಿರಾನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಆನ್‌ಲೈನ್ ವಸ್ತುಗಳನ್ನು ಡೆಲಿವರಿ ಮಾಡುವ ಯುವಕನೊಬ್ಬ ತನ್ನ ವಾಹನ ನಿಲ್ಲಿಸಿ ವಸ್ತುಗಳನ್ನು ಕೊಡಲು ಹೋಗಿದ್ದರು. ವಾಪಸ್ ಬಂದಾಗ ಟೋಯಿಂಗ್ ಸಿಬ್ಬಂದಿ ದ್ವಿಚಕ್ರ ವಾಹನವನ್ನು ತಮ್ಮ ವಾಹನಕ್ಕೆ ತುಂಬಿಕೊಂಡಿದ್ದಾರೆ. ಅದನ್ನು ಕಂಡ ಆತ ಕೂಡಲೇ ವಾಹನ ಹಿಡಿದುಕೊಂಡು ನಿಲ್ಲಿಸುವಂತೆ ಗೋಳಾಡಿದ್ದಾನೆ.
ಆದರೂ ಟೋಯಿಂಗ್ ಸಿಬ್ಬಂದಿ ವಾಹನ ನಿಲ್ಲಿಸಿಲ್ಲ. ವಾಹನ ಸವಾರ ವಾಹನ ಬಿಡಿಸಿಕೊಳ್ಳಲು ಓಡುತ್ತಿರುವ ದೃಶ್ಯ ಸಂಚಾರ ಪೊಲೀಸರ ಅಮಾನವೀಯ ವರ್ತನೆಗೆ ಸಾಕ್ಷಿಯಾಗಿತ್ತು. ಈ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಘಟನೆನೆಗೆ ಸಂಬಂಧಿಸಿದಂತೆ ಟೋಯಿಂಗ್ ಸಿಬ್ಬಂದಿ ದುರ್ವತನೆ ವಿರುದ್ಧ ತನಿಖೆ ನಡೆಸುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಆದೇಶಿಸಿದ್ದಾರೆ. ವಿಚಾರಣೆ ಮುಕ್ತಾಯವಾಗುವವರೆಗೂ ಟೋಯಿಂಗ್ ವಾಹನದ ಸೇವೆಯನ್ನು ಅಮಾನತ್ತಿನಲ್ಲಿಡಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಎಎಸ್ಐರನ್ನು ಟೋಯಿಂಗ್ ಕರ್ತವ್ಯದಿಂದ ಹಿಂಪಡೆದು ಬೇರೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ