ಬೆಂಗಳೂರು: ಜೆಡಿಎಸ್ ಜತೆ ಮೈತ್ರಿ(BJP-JDS alliance ) ಸಂಬಂಧ ಪಕ್ಷದೊಳಗೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai ) ಸ್ಪಷ್ಟಪಡಿಸಿದ್ದಾರೆ.
ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಕುರಿತು ಜೆಡಿಎಸ್ ಜತೆ ಮೈತ್ರಿ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಪಕ್ಷದಲ್ಲಿ ಮೈತ್ರಿ ಬಗೆಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಕುರಿತು ಯಡಿಯೂರಪ್ಪ ಅವರ ಜತೆಯಲ್ಲೇ ಮಾತುಕತೆ ನಡೆಸುತ್ತೇನೆ ಎಂದರು.
ನೆರೆ ಪೀಡಿತ ಪ್ರದೇಶಕ್ಕೆ ಸಚಿವರ ಭೇಟಿಗೆ ಆಯೋಗದ ಸಮ್ಮತಿ:
ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆಹಾನಿ ಸಂಭವಿಸಿದೆ. ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು ಪ್ರವಾಸ ಮಾಡಬಹುದು. ಮುಖ್ಯಮಂತ್ರಿಗಳು ಪ್ರವಾಸ ಮಾಡಬಹುದು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಮಾಡಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಸಚಿವರು ಮತ್ತು ನಾನು ಪ್ರವಾಸಕ್ಕೆ ಹೋಗುತ್ತೇವೆ. ಇಂದು ಕೋಲಾರಕ್ಕೆ ಭೇಟಿ ನೀಡಿ ನರೆ ಹಾನಿ ಪರಿಶೀಲನೆ ಮಾಡಲಿದ್ದೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಬೆಳೆ ಸಮೀಕ್ಷೆ ಇಂದಿನಿಂದ ಆರಂಭ:
500 ಕೋಟಿ ರೂ.ಗಳನ್ನು ರಸ್ತೆ ದುರಸ್ತಿಪಡಿಸಲು ಬಿಡುಗಡೆ ಮಾಡಲಾಗಿದೆ. ಎಲ್ಲೆಲ್ಲಿ ಮನೆಗಳು ಬಿದ್ದಿವೆ ಅವರಿಗೆ ತಕ್ಷಣ 1 ಲಕ್ಷ ರೂ. ಬಿಡುಗಡೆ ಮಾಡಲಾಗುತ್ತದೆ. ಭಾಗಶಃ ಬಿದ್ದಿರುವ ಮನೆಗೆ ಹಣ ಬಿಡುಗಡೆಗೆ ಆದೇಶಿಸಿದ್ದೇನೆ. ಬೆಳೆ ಸಮೀಕ್ಷೆ ಇಂದಿನಿಂದ ಶೀಘ್ರವಾಗಿ ಆರಂಭವಾಗಲಿದೆ. ಪರಿಹಾರ ಆ್ಯಪ್ನಲ್ಲಿ ನಷ್ಟದ ವಿವರ ದಾಖಲಾಗಬೇಕು. ಅದರಂತೆ ಪರಿಹಾರ ಬಿಡುಗಡೆ ಮಾಡಲಾಗುತ್ತದೆ ಎಂದರು.
ಕನಕನ ಆದರ್ಶ ಪಾಲಿಸಬೇಕು:
ಸಮಸ್ತ ನಾಡಿನ ಜನತೆಗೆ ಕನಕ ಜಯಂತಿಯ ಶುಭಾಶಯಗಳು. ಕನಕನ ಆದರ್ಶ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ. ಅವರ ಆದರ್ಶವನ್ನು ನಾವೆಲ್ಲರೂ ಪಾಲನೆ ಮಾಡುವುದು ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯವಿದೆ ಎಂದು ಸಿಎಂ ತಿಳಿಸಿದರು.
ಸಂತಾಪ:
ಹಾಲಗೆರೆ ಮಠದ ಶ್ರೀಗಳು ನಿಧನರಾಗಿದ್ದಾರೆ. ಅಂತಿಮ ನಮನ ಸಲ್ಲಿಸಲು ಅಪೋಲೊ ಆಸ್ಪತ್ರೆಗೆ ತೆರಳುತ್ತಿದ್ದೇನೆ. ಸಾವಿರಾರು ಭಕ್ತರನ್ನು ಹೊಂದಿದ್ದ ಆಲಕೆರೆ ಮಠದ ಶ್ರೀಗಳು ಆ ಭಾಗದಲ್ಲಿ ಅತ್ಯಂತ ಪ್ರಭಾವಿ ಶ್ರೀಗಳಾಗಿದ್ದರು. ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಆಶೀರ್ವಾದ ನಮ್ಮೆಲ್ಲರ ಮೇಲೆ ಇತ್ತು. ಅವರ ಆಗಲಿಕೆಯಿಂದ ಸಾವಿರಾರು ಭಕ್ತರು ದುಃಖತಪ್ತರಾಗಿದ್ದಾರೆ. ಶ್ರೀಗಳ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದರು.
ಇದನ್ನೂ ಓದಿ: ಹಾಲಕೆರೆ ಅನ್ನದಾನೇಶ್ವರ ಸ್ವಾಮೀಜಿ ಲಿಂಗೈಕ್ಯ: ಸಿಎಂ ಸಂತಾಪ