ಬೆಂಗಳೂರು: ಡಾ.ರಾಜ್ ಕುಮಾರ್ ಕುಟುಂಬದ ಅಪೇಕ್ಷೆಯಂತೆ ಇಂದು ಬೆಳಗ್ಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಶಾಸ್ತ್ರೋಕ್ತವಾಗಿ ಪುನೀತ್ ರಾಜ್ಕುಮಾರ್ ಅಂತ್ಯ ಸಂಸ್ಕಾರ ನೆರವೇರಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿದ್ದು, ಅವರ ಇಚ್ಛೆಯಂತೆ ನಾಳೆ ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ಹೋಗಿ ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತದೆ. ಆದಷ್ಟ ಬೇಗ ಅಂತ್ಯ ಸಂಸ್ಕಾರ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಆದರೆ ನಿಖರ ಸಮಯ ನಿಗದಿ ಮಾಡಿಲ್ಲ ಎಂದರು.
ಪುನೀತ್ ನಿಧನರಾಗಿ ಇಂದಿಗೆ ಮೂರು ದಿನವಾಗಲಿದೆ ಹಾಗಾಗಿ ಮೂರನೇ ದಿನದ ಹಾಲು ತುಪ್ಪ ಕೂಡ ಇಂದು ಆಗಬೇಕಿದೆ. ಅದಕ್ಕೂ ಮೊದಲು ಅಂತ್ಯ ಸಂಸ್ಕಾರ ಕಾರ್ಯ ಮುಗಿದು ಅವರೆಲ್ಲಾ ಮನೆಗೆ ಹೋಗಿ ಮತ್ತೆ ಸಮಾಧಿ ಸ್ಥಳಕ್ಕೆ ಬಂದು ಹಾಲು ತುಪ್ಪ ಬಿಡಬೇಕಿದೆ. ಹಾಗಾಗಿ ಬೆಳಗ್ಗೆ 5 ಗಂಟೆಯಿಂದ ಅಂತಿಮ ಯಾತ್ರೆ ಆರಂಭವಾಗಲಿದೆ. 6 ಅಥವಾ 7 ಗಂಟೆಗೆ ಅಂತ್ಯ ಸಂಸ್ಕಾರ ಆರಂಭಿಸಲಾಗುತ್ತದೆ. 9 ಗಂಟೆಯ ಒಳಗೆ ಮುಗಿಸಬೇಕು ಎನ್ನುವ ಚಿಂತನೆ ಇದ್ದು, ಪುನೀತ್ ಕುಟುಂಬ ಸದಸ್ಯರು ಬಯಸುವ ಸಮಯ ನೋಡಿಕೊಂಡು ಅಂತ್ಯ ಸಂಸ್ಕಾರ ನೆರವೇರಿಸುತ್ತೇವೆ ಎಂದು ಸಿಎಂ ತಿಳಿಸಿದರು.
ಇಂದು ಬೆಳಗ್ಗೆವರೆಗೂ ಕಂಠೀರವ ಕ್ರೀಡಾಂಗಣದಲ್ಲಿ ದರ್ಶನಕ್ಕೆ ಅವಕಾಶ ಇರಲಿದೆ. ಅಂತ್ಯ ಸಂಸ್ಕಾರದ ವೇಳೆ ಸ್ಟುಡಿಯೋದಲ್ಲಿ ಕುಟುಂಬ ಸದಸ್ಯರಿಗೆ, ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಾರ್ವಜನಿಕರಿಗೆ ಅವಕಾಶವಿಲ್ಲ. ಹಾಗಾಗಿ ಜನರು ಸಹಕಾರ ನೀಡಬೇಕು, ಅಂತ್ಯ ಸಂಸ್ಕಾರ ನಡೆದ ನಂತರ ಸಮಾಧಿ ಸ್ಥಳದ ಸುರಕ್ಷತೆ ಆಗುವವರೆಗೂ ಯಾರಿಗೂ ಅಲ್ಲಿ ಪ್ರವೇಶ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
(ಅಪ್ಪ ಪುನೀತ್ ತಲೆ ಸವರಿ ಮುತ್ತು ಕೊಟ್ಟ ಪುತ್ರಿ ಧೃತಿ.. ಪಾರ್ಥಿವ ಶರೀರ ಕಂಡು ಉಮ್ಮಳಿಸಿದ ದುಃಖ..)