ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ 100 ದಿನ ಪೂರೈಸಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಿಲ್ಲೊಂದು ಹೊಸ ಯೋಜನೆಯನ್ನು ತರುವ ಮೂಲಕ, ಕೋವಿಡ್ ಸ್ಥಿತಿಯನ್ನು ನಿಭಾಯಿಸಿ ರಾಜ್ಯದ ಜನರನ್ನು ತಲುಪಿದ್ದಾರೆ.
ರೈತ ಮಕ್ಕಳಿಗೆ ಶಿಕ್ಷಣ:
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಮಾಡಿದ ಮೊದಲ ಕೆಲಸವೆಂದರೆ, ರೈತರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಕೊಡುಗೆಯಾಗಿ 'ಮುಖ್ಯಮಂತ್ರಿ ರೈತ ವಿದ್ಯಾನಿಧಿ' ಯೋಜನೆ ಜಾರಿ ಮಾಡಿದ್ದು. 1,000 ಕೋಟಿ ರೂ. ಹಣವನ್ನು ಮೀಸಲಿರಿಸಿ 19 ಲಕ್ಷ ರೈತ ಮಕ್ಕಳಿಗೆ ಲಾಭವಾಗುವ ಯೋಜನೆ ಪ್ರಕಟಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ:
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಬೊಮ್ಮಾಯಿ ಸರ್ಕಾರ ರಾಷ್ಟ್ರಶಿಕ್ಷಣ ನೀತಿಯನ್ನು ಒಪ್ಪಿಕೊಂಡು ಜಾರಿಗೆ ತಂದಿದೆ. ಇದರ ಜೊತೆ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ 1,200 ರೂ.ಗಳಿಗೆ ಹೆಚ್ಚಳ, ವಿಧವಾ ವೇತನ 800 ರೂ. ಗಳಿಗೆ ಏರಿಕೆ, ದಿವ್ಯಾಂಗಿಗಳ ಮಾಸಿಕ ವೇತನ 800 ರೂ. ಗಳಿಗೆ ಹೆಚ್ಚಳ ಮಾಡಿ ಆದೇಶಿಸಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಯೋಜನೆಗಳ ಘೋಷಣೆ, ಸರ್ಕಾರದ ವತಿಯಿಂದ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ ಘೋಷಣೆ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಆನ್ಲೈನ್ ಜೂಜು ಮತ್ತು ಬೆಟ್ಟಿಂಗ್ಗಳನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಣೆ ಮಾಡಿದೆ.
ಅಭಿವೃದ್ಧಿಗೆ ಅನುದಾನ:
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚುವರಿಯಾಗಿ 1,500 ಕೋಟಿ ರೂ.ಗಳ ಅನುದಾನ ನೀಡಲು ಘೋಷಿಸಿದೆ. ಮುಂಬೈ ಕರ್ನಾಟಕ ಪ್ರದೇಶವನ್ನು 'ಕಿತ್ತೂರು ಕರ್ನಾಟಕ' ಎಂದು ಮರು ನಾಮಕರಣ ಮಾಡುವುದಾಗಿ ಪ್ರಕಟಿಸಿದೆ. ಜೊತೆಗೆ ರಾಜ್ಯದ 31ನೇ ಹೊಸ ಜಿಲ್ಲೆಯಾಗಿ ವಿಜಯಪುರವನ್ನು ಘೋಷಿಸಲಾಗಿದೆ.
ಆನ್ಲೈನ್ ಸೇವೆ:
ಗ್ರಾಮ ಪಂಚಾಯತ್ ಹಂತದಲ್ಲಿ ನಾಗರಿಕ ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸುವ 'ಗ್ರಾಮ ಸೇವಾ ಯೋಜನೆ'ಗೆ ಪ್ರಾಯೋಗಿಕ ಚಾಲನೆ ನೀಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ 20 ಗ್ರಾಮಗಳ ಸ್ಥಳಾಂತರ ಮಾಡಲು ಎರಡು ಸಾವಿರ ಕೋಟಿ ಅನುದಾನ ಒದಗಿಸಲು ಘೋಷಣೆ ಮಾಡಲಾಗಿದೆ. ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ವಿಶ್ವೇಶ್ವರಯ್ಯ ನಾಲೆಯ ಸಂಪೂರ್ಣ ಆಧುನೀಕರಣಕ್ಕೆ ಮುಂದಾಗಿದ್ದು, 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 1,600 ಕಿಲೋ ಮೀಟರ್ ಉದ್ದದ ಆಧುನೀಕರಣ ಪ್ರಸ್ತಾವನೆಗೆ ಅನುಮೋದನೆ ನೀಡಲಾಗುತ್ತಿದ್ದು, ಎತ್ತಿನಹೊಳೆ ಯೋಜನೆಯ ತ್ವರಿತ ಅನುದಾನಕ್ಕೆ ತೀರ್ಮಾನಿಸಿದೆ.
ಮುಖ್ಯಮಂತ್ರಿಗಳ ಡ್ಯಾಶ್ ಬೋರ್ಡ್:
ಪ್ರಧಾನಿ ಡ್ಯಾಶ್ ಬೋರ್ಡ್ ಮಾದರಿಯಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಡ್ಯಾಶ್ ಬೋರ್ಡ್ ಆರಂಭಿಸಿದ್ದು, ವಿವಿಧ ಇಲಾಖೆಯ ಪ್ರಗತಿಯಲ್ಲಿ ಕ್ಷಿಪ್ರ ನೋಟ ಲಭ್ಯವಾಗಲಿದೆ. ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಚಟುವಟಿಕೆಗಳಿಗೆ ಸಂಬಂಧಿಸಿದ 30 ಸೇವೆಗಳ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ.
ಜನಸೇವಕ ಯೋಜನೆ ಜಾರಿ:
ನಾಗರಿಕರ ಸಮಯದ ಉಳಿತಾಯಕ್ಕೆ ಅನುಕೂಲವಾಗುವಂತೆ ಮತ್ತು ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ನೆರವಾಗಲು ಸರ್ಕಾರದ 5 ಕ್ಕೂ ಹೆಚ್ಚಿನ ನಾಗರಿಕ ಸೇವೆಗಳನ್ನು ಜನರ ಮನೆಬಾಗಿಲಿಗೆ ಒದಗಿಸಲು ಜನಸೇವಕ ಯೋಜನೆ ಜಾರಿ ಮಾಡಲಾಗಿದೆ. ಸದ್ಯ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಯೋಜನೆ ಜಾರಿ ಮಾಡಿದ್ದು, ಜನವರಿ 26ಕ್ಕೆ ರಾಜ್ಯಾದ್ಯಂತ ಇದನ್ನು ವಿಸ್ತರಣೆ ಮಾಡುವುದಾಗಿ ಘೋಷಿಸಿದೆ.
ರಾಜ್ಯೋತ್ಸವ ಪ್ರಶಸ್ತಿ ಪ್ರಕ್ರಿಯೆ:
ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಗೆ ನಗದು ಪುರಸ್ಕಾರವನ್ನು 1 ಲಕ್ಷದಿಂದ 5 ಲಕ್ಷ ರೂ. ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆಗೆ ತಿಲಾಂಜಲಿ ಹಾಡಿ ಸಮಿತಿಯೇ ಆಯ್ಕೆ ಮಾಡುವ ವ್ಯವಸ್ಥೆ ತರುವುದಾಗಿ ಘೋಷಿಸಿದೆ.
ಕ್ಯಾ. ಗಣೇಶ್ ಕಾರ್ಣಿಕ್ ಏನಂತಾರೆ?
ಸರ್ಕಾರದ 100 ದಿನದ ಸಾಧನೆಗೆ ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ತೃಪ್ತಿ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಮತ್ತು ಬೊಮ್ಮಾಯಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿರುವ ಕಾರ್ಣಿಕ್, ವಿಶೇಷ ಸಂದರ್ಭದಲ್ಲಿ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರ ಜೊತೆ ನಾನು ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಯಾವುದೇ ವಿಷಯವನ್ನು ಆಳಕ್ಕಿಳಿದು ಅಧ್ಯಯನ ಮಾಡಿ ತಿಳಿದುಕೊಳ್ಳುವ ಸಾಮರ್ಥ್ಯ ಅವರಿಗಿದೆ. ಸದನದಲ್ಲಿ ಆ ನಿಮಿಷದಲ್ಲಿಯೇ ಉತ್ತರ ಕೊಡುವ ಸಾಮರ್ಥ್ಯವಿದೆ. ಮೂರು ದಶಕದ ರಾಜಕೀಯ ಜೀವನದಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲ. ಎಲ್ಲರೊಂದಿಗೂ ಬೆರೆಯುವ, ಸರಳ ವ್ಯಕ್ತಿತ್ವ ಅವರದ್ದು ಎಂದರು.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಕೂಡ ರಾಜಕೀಯ ಹಿನ್ನೆಲೆಯಿಂದ ಬಂದಿದ್ದಾರೆ. ಅವರ ತಂದೆಯ ಜೊತೆಗಿನ ರಾಜಕೀಯ ಒಡನಾಟ, ಎಲ್ಲವನ್ನೂ, ಎಲ್ಲರನ್ನೂ ಸೇರಿಸಿಕೊಂಡು 100 ದಿನದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಅವರು ತೆಗೆದುಕೊಂಡ ನಿರ್ಣಯ, ಕನ್ನಡಪರ ಚಿಂತನೆ, ಅಭಿವೃದ್ಧಿಪರ ಚಿಂತನೆ, ದೆಹಲಿಗೆ ಹೋಗಿ ಜಿಎಸ್ಟಿ ಸೇರಿ ಹಲವು ಅಭಿವೃದ್ಧಿಪರ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು, ಇಬ್ಬರೂ ಮಂತ್ರಿಗಳನ್ನು ಗಲ್ಫ್ ಗೆ ಕಳುಹಿಸಿ ಹೂಡಿಕೆಗೆ ಉತ್ತೇಜನ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯಕ್ಕೆ ಒಳ್ಳೆಯ ಮುಖ್ಯಮಂತ್ರಿ ಸಿಕ್ಕಿದ್ದಾರೆ:
ಒಂದು ರೀತಿಯಲ್ಲಿ ಯಡಿಯೂರಪ್ಪನವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡುತ್ತಿದ್ದರು. ಅದೇ ರೀತಿ ಈಗ ಬೊಮ್ಮಾಯಿ ಕೂಡ ಕಾಲಿಗೆ ಚಕ್ರಕಟ್ಟಿಕೊಂಡಂತೆ ಓಡಾಡುತ್ತಿದ್ದಾರೆ. ಒಳ್ಳೆಯ ಮುಖ್ಯಮಂತ್ರಿ ರಾಜ್ಯಕ್ಕೆ ಸಿಕ್ಕಿದ್ದಾರೆ. ದೂರದೃಷ್ಟಿಯುಳ್ಳ ಮುಖ್ಯಮಂತ್ರಿ, ರಚನಾತ್ಮಕ ಕಾರ್ಯಕ್ರಮಗಳನ್ನು ಕೊಡಬಲ್ಲ ಮುಖ್ಯಮಂತ್ರಿ ಆಗಿದ್ದಾರೆ. ಹಾಗಾಗಿ ನೂರು ದಿನದ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಬಿಜೆಪಿ ಪರವಾಗಿ ಮತ್ತು ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಎಸ್ವೈ ಬಲಗೈ ಬಂಟ:
ಬಸವರಾಜ ಬೊಮ್ಮಾಯಿ ಬಹಳ ಅನುಭವಿ ರಾಜಕಾರಣಿ. ಯಡಿಯೂರಪ್ಪನವರ ನೇತೃತ್ವದಲ್ಲಿ ಪಳಗಿದ್ದಾರೆ. ಹಿಂದೆ ಅನೇಕ ಮುಖ್ಯಮಂತ್ರಿಗಳ ಜೊತೆ ಒಡನಾಟ ಇತ್ತು. ಜೆ.ಹೆಚ್ ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ 2008 ರಿಂದ ಇಲ್ಲಿಯವರೆಗೆ ಬಲಗೈ ಬಂಟನಂತೆ ಕೆಲಸ ಮಾಡಿದ್ದಾರೆ. ಯಡಿಯೂರಪ್ಪನವರ ಪೂರ್ಣ ಆಶೀರ್ವಾದ ಅವರ ಮೇಲಿದೆ. ಅವರ ಅನುಭವದ ಎಲ್ಲ ಸಂಗತಿಗಳನ್ನು ಇವರಿಗೆ ಬಳುವಳಿ ಮಾಡಿಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಹೆಜ್ಜೆಯ ಗುರುತುಗಳನ್ನು ಅನುಕರಣೆ ಮಾಡುವ ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಬಸವರಾಜ ಬೊಮ್ಮಾಯಿ ಅವರಿಗೆ ಇದೆ. ಬೊಮ್ಮಾಯಿ ನೇತೃತ್ವದಲ್ಲಿ ಉಳಿದ ಅವಧಿಯಲ್ಲಿ ಕರ್ನಾಟಕ ಸರ್ಕಾರ ಅದ್ಭುತ ಸಾಧನೆ ಮಾಡುವ ಎಲ್ಲ ಸಾಧ್ಯತೆ ನಾವು ನಿರೀಕ್ಷಿಸಿದ್ದೇವೆ ಎಂದು ತಿಳಿಸಿದರು.