ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂಬಂಧ ಅಮಿತ್ ಶಾ ಜೊತೆ ಮಾತುಕತೆ ನಡೆಸಲು ನಾಳೆ ದೆಹಲಿಗೆ ತೆರಳಬೇಕಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರವಾಸ ಮತ್ತೊಮ್ಮೆ ರದ್ದಾಗಿದ್ದು, ಸಂಕ್ರಾಂತಿಯಂದು ಸಿಹಿ ಸುದ್ದಿಯ ನಿರೀಕ್ಷೆಯಲ್ಲಿದ್ದ ಸಚಿವಾಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
ಅಮಿತ್ ಶಾ, ಭೇಟಿಗೆ ಸಮಯ ನೀಡಿದರೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ದೆಹಲಿಗೆ ತೆರಳುವುದಾಗಿ ಬೆಳಗ್ಗೆಯಷ್ಟೇ ಹೇಳಿಕೆ ನೀಡಿದ್ದ ಸಿಎಂ, ಇದೀಗ ದೆಹಲಿ ಪ್ರವಾಸದ ಬದಲು ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ನಾಳೆ ಚಿಕ್ಕಮಗಳೂರಿಗೆ ತೆರಳಲಿರುವ ಸಿಎಂ ಬಿಎಸ್ವೈ, ಜಿಲ್ಲೆಯ ಸೊಲ್ಲಾಪುರದಲ್ಲಿ ನಡೆಯಲಿರುವ ಗುರುಸಿದ್ಧರಾಮ ಶಿವಯೋಗಿಗಳ 847 ನೇ ಜಯಂತಿ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಂತರ ದಾವಣಗೆರೆ ಮೂಲಕ ಹರಿಹರಕ್ಕೆ ತೆರಳಿ, ಬೆಳ್ಳಿ ಬೆಡಗು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಅಲ್ಲಿಂದ ಸ್ವಕ್ಷೇತ್ರ ಶಿಕಾರಿಪುರಕ್ಕೆ ತೆರಳಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ನಾಡಿದ್ದು ಮತ್ತೆ ದಾವಣಗೆರೆಯ ಹರಿಹರಕ್ಕೆ ತೆರಳಲಿದ್ದಾರೆ. ಬಳಿಕ ಹಾವೇರಿಗೆ ತೆರಳಲಿರುವ ಸಿಎಂ ಬಿಎಸ್ವೈ, ಹಾವೇರಿಯಲ್ಲಿ ನಡೆಯಲಿರುವ ಅಂಬಿಗಚೌಡಯ್ಯರ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಅಂದು ಸಂಜೆ 5 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಎರಡು ದಿನಗಳ ಕಾಲ ಮೂರು ಜಿಲ್ಲೆಗಳ ಪ್ರವಾಸ ಮಾಡುತ್ತಿರುವ ಸಿಎಂ, ಈ ಎಲ್ಲಾ ಸ್ಥಳಗಳಿಗೂ ಹೆಲಿಕಾಪ್ಟರ್ನಲ್ಲೇ ಪ್ರಯಾಣಿಸಲಿದ್ದಾರೆ. ಸಿಎಂ ದೆಹಲಿ ಪ್ರವಾಸಕ್ಕೆ ತೆರಳದಿರುವ ಹಿನ್ನಲೆಯಲ್ಲಿ ಅಮಿತ್ ಶಾ, ಜನವರಿ 18 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು ಅಮಿತ್ ಶಾ ಅವರ ನಿಗದಿತ ಕಾರ್ಯಕ್ರಮಗಳು ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.