ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ದೇಶ ತೊರೆಯಲು ನೆರವಾಗಿದ್ದ ಶಿಷ್ಯ ಘುಲಾಮ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಪ್ರಕರಣವೊಂದರಲ್ಲಿ ಪೂಜಾರಿ ಜೊತೆ ಈತ ಶಾಮೀಲಾಗಿದ್ದ ಎಂದು ತಿಳಿದುಬಂದಿದೆ.
ಈತನನ್ನು ಬಳಸಿಕೊಂಡು ರವಿ ಪೂಜಾರಿ ಸುಲಿಗೆ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ದೂರವಾಣಿ ಮೂಲಕ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ವಿಚಾರ ತನಿಖೆಯಲ್ಲಿ ಬಯಲಾಗಿತ್ತು. ಹೀಗಾಗಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಘುಲಾಮ್ಗಾಗಿ ತಂಡ ಶೋಧ ಮುಂದುವರೆಸಿದ್ದರು. ಆರೋಪಿ ಮಂಗಳೂರಿನ ಬಳಿ ಇರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಘುಲಾಮ್ನನ್ನು ಬಂಧಿಸಿದ್ದಾರೆ. ಈಗ ಕೋರ್ಟ್ 10 ದಿನಗಳ ಕಾಲ ಪೊಲೀಸರ ವಶಕ್ಕೆ ಘುಲಾಮ್ನನ್ನು ನೀಡಿದೆ.
ಘುಲಾಮ್ 2013ರಲ್ಲಿ ಬಾಲಿವುಡ್ ಸಿನಿಮಾ ನಟರಾದ ಶಾರುಕ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಡಿಕೆಶಿ ಕುಟುಂಬಸ್ಥರಿಗೆ ಹೀಗೆ ಹಲವಾರು ಮಂದಿಗೆ ರವಿ ಜೊತೆ ಸೇರಿ ಕರೆ ಮಾಡಿ ಹಣಕ್ಕೆ ಬೆಡಿಕೆ ಇಟ್ಟಿದ್ದ. ಹೀಗಾಗಿ ಈ ಎಲ್ಲಾ ಕೃತ್ಯದಲ್ಲಿ ಘುಲಾಮ್ನ ಕೈವಾಡ ಇದೆ. ರವಿ ಪೂಜಾರಿ ಹೇಳಿದಂತೆ ಘುಲಾಮ್ ಕೆಲಸ ಮಾಡುತ್ತಿದ್ದ. ಸದ್ಯ ರವಿ ಪೂಜಾರಿ ಮೇಲೆ ಒಟ್ಟು 90ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಅದರಲ್ಲಿ ಬೆಂಗಳೂರಿನಲ್ಲಿ 39, ಮಂಗಳೂರಿನಲ್ಲಿ 36, ಉಡುಪಿಯಲ್ಲಿ 11 ಕೇಸ್ಗಳು ದಾಖಲಾಗಿವೆ.