ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಕೆರೆಗಳ ಸರ್ವೇ ಕಾರ್ಯವನ್ನು ಪುನರ್ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿರುವ ಹೈಕೋರ್ಟ್, ಕೆರೆ ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೇ ತ್ವರಿತವಾಗಿ ತೆರವು ಮಾಡುವಂತೆ ಖಡಕ್ ನಿರ್ದೇಶನ ನೀಡಿದೆ.
ಕೆರೆಗಳ ಒತ್ತುವರಿ ತೆರವು ಹಾಗೂ ಅವುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಅರ್ಜಿಗಳ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ನ್ಯಾಯಾಲಯದ ನಿರ್ದೇಶನದಂತೆ 2021ರ ಫೆಬ್ರವರಿ 23ರವರೆಗೆ ರಾಜ್ಯದ 39,179 ಕೆರೆಗಳ ಪೈಕಿ 17 ಸಾವಿರ ಕೆರೆಗಳ ಸರ್ವೇ ಮಾಡಲಾಗಿದೆ.
ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಕೋವಿಡ್ 2ನೇ ಅಲೆ ತೀವ್ರವಾಗಿದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡರು. ಹೀಗಾಗಿ, ಸರ್ವೇ ಕಾರ್ಯ ಅಲ್ಲಿಗೆ ಸ್ಥಗಿತಗೊಂಡಿತ್ತು. ಮತ್ತೆ ಜೂನ್ 18ರಂದು ರಾಜ್ಯ ಮಟ್ಟದ ಸಮಿತಿ ಸಭೆ ನಡೆಸಿದ್ದು, ಸರ್ವೇ ಕಾರ್ಯ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪ್ರಸ್ತುತ ಕೋವಿಡ್ ಅಲೆ ಕ್ಷೀಣಿಸಿದೆ. ಹೀಗಾಗಿ ಕೆರೆಗಳ ಸರ್ವೇ ಕಾರ್ಯ ನಡೆಸಲು ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ, ಬಾಕಿ ಉಳಿದಿರುವ ಕೆರೆಗಳ ಸರ್ವೇ ಕಾರ್ಯಯವನ್ನು ಶೀಘ್ರ ನಡೆಸುವಂತೆ ಹಾಗೂ ಒತ್ತುವರಿ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೀಠ ಸರ್ಕಾರಕ್ಕೆ ನಿರ್ದೇಶಿಸಿತು.
ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್:
ವಿಚಾರಣೆ ವೇಳೆ ರಾಜ್ಯದ ಕೆರೆಗಳ ಸಂರಕ್ಷಣೆ ಅಧಿಕಾರ ಹಾಗೂ ಜವಾಬ್ದಾರಿ ಹೊಂದಿರುವ ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿತು. ಹಾಗೆಯೇ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ತಿದ್ದುಪಡಿ ಕಾಯ್ದೆಯ ಸೆಕ್ಷನ್ 12ರ ಅನ್ವಯ ಕೆರೆ ಸುತ್ತಲಿನ 30 ಮೀಟರ್ ಪ್ರದೇಶ ಬಫರ್ ಜೋನ್ ಆಗಿದ್ದು, ಅದರಲ್ಲಿನ ಒತ್ತುವರಿಯನ್ನು ತೆರವು ಮಾಡಲು ನಿರ್ದೇಶಿಸಿತು.
ಅಂತೆಯೇ, ಕೆರೆ ಒತ್ತುವರಿ ತೆರವುಗೊಳಿಸಲು ಭೂ ಕಂದಾಯ ಕಾಯ್ದೆ-1964ರ ಅನ್ವಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿ, ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಿತು.
ರಾಜಕಾಲುವೆಗಳ ತೆರವಿಗೂ ಕೋರಿಕೆ :
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರೊಬ್ಬರು ಕೆರೆಗಳ ಜೊತೆಗೆ ರಾಜಕಾಲುವೆಗಳ ಸರ್ವೇಗೂ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜಕಾಲುವೆಗಳ ಸರ್ವೇ ನಡೆಸುವಂತೆ ನಿರ್ದೇಶನ ನೀಡಲು ಅಭ್ಯಂತರವಿಲ್ಲ. ಆದರೆ, ರಾಜಕಾಲುವೆ ಸಾಮಾನ್ಯವಾಗಿ ಬಳಸಿಕೊಂಡು ಬಂದ ಪದವಾಗಿದೆ. ರಾಜಕಾಲುವೆ ಏನೆಂದು ವ್ಯಾಖ್ಯಾನಿಸುವ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರ ವಿವರಣೆ ನೀಡಿದ ನಂತರ ನಿರ್ದೇಶನ ನೀಡಲಾಗುವುದು ಎಂದು ಪೀಠ ತಿಳಿಸಿತು.