ಹೊಸಕೋಟೆ: ಕಳೆದ ಒಂದೂವರೆ ವರ್ಷಗಳ ಹಿಂದೆ ವಿಶೇಷಚೇತನರಿಗಾಗಿ ಮಂಜೂರಾಗಿದ್ದ ತ್ರಿಚಕ್ರ ವಾಹನಗಳನ್ನು ಇಂದು ಫಲಾನುಭವಿಗಳಿಗೆ ವಿತರಣೆ ಮಾಡಲು ತಾಲೂಕು ಕಚೇರಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ನೀಡುವ ಕಾರ್ಯಕ್ರಮಕ್ಕೆ ಸರ್ಕಾರಿ ಪ್ರೋಟಾಕಾಲ್ ನಿಯಮ ಪಾಲನೆ ಮಾಡದೆ ಅಧಿಕಾರಿಗಳು ಶಾಸಕರನ್ನು ಕಾರ್ಯಕ್ರಮಕ್ಕೆ ಒಂದು ದಿನ ಇರುವಾಗ ಬಂದು ಬೇಕಾಬಿಟ್ಟಿಯಾಗಿ ನಾಳೆ ಬನ್ನಿ ಎಂದು ಕೆರೆದು ಹೋಗಿದ್ದಾರೆ. ಸಚಿವ ಎಂಟಿಬಿ ನಾಗರಾಜ್ ಕೈಗೊಂಬೆಗಳಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ಆರೋಪಿಸಿದರು.
ಇಂದು ಶಾಸಕರು ಕಾರ್ಯಕ್ರಮಕ್ಕೆ ತಮ್ಮ ಬೆಂಬಲಿಗರ ಜೊತೆ ಬರುವುದನ್ನು ನೋಡಿ ಪೊಲೀಸರು ತಡೆದರು. ಇದಕ್ಕೆ ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬ್ಯಾರಿಕೇಡ್ ಮತ್ತು ತಾಲೂಕು ಪಂಚಾಯತಿಯ ಗೇಟ್ ತಳ್ಳಿಕೊಂಡು ಬೆಂಬಲಿಗರು ಒಳಗಡೆ ನುಗ್ಗಿದರು. ಈ ವೇಳೆ ಶಾಸಕ ಶರತ್ ಬಚ್ಚೇಗೌಡ ತಾಲೂಕು ಪಂಚಾಯತಿ ಎದುರು ಕೆಲ ಕಾಲ ಧರಣಿ ಮಾಡಿದರು.
ಅನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಪ್ರತಿಭಟನೆ ಮಾಡುತಿದ್ದ ಶಾಸಕ ಶರತ್ ಮನವೊಲಿಸಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದರು. ಸಚಿವರ ಜೊತೆಗೆ ಶಾಸಕರು ಜೊತೆಗೂಡಿ ಬಿಗಿ ಬಂದೋಬಸ್ತ್ ನಡುವೆ ಸರಳವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಸಚಿವರ ಮುಂದೆಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಂದು ನಾವು ಮಾಡುತ್ತಿರುವ ಕಾರ್ಯಕ್ರಮ ವಿಕಲಚೇತನರಿಗಾಗಿ. ಆದರೆ ಅವರು ಸ್ವಾವಲಂಬಿ, ಸ್ವಾಭಿಮಾನಿಯಾಗಿ ತಮ್ಮ ಬದುಕು ಕಟ್ಟಿಕೊಂಡು ಬದುಕುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಮಳೆ, ಬಿಸಿಲು, ಗಾಳಿ ಎನ್ನದೇ ಸೂಮಾರು 18 ವಿಶೇಷ ಚೇತನರ ವಾಹನಗಳು ಯಾವುದೋ ಕಾಣದ ಕೈಗಳ ಕೈವಾಡದಿಂದ ಇಲ್ಲಿಯೇ ಕೊಳೆಯುತ್ತಿದ್ದವು ಎಂದು ಪರೋಕ್ಷವಾಗಿ ಎಂಟಿಬಿ ನಾಗರಾಜ್ಗೆ ಟಾಂಗ್ ನೀಡಿದರು.