ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯಿದೆ ಎಲ್ಲಾ ಧರ್ಮೀಯರೂ, ತಮ್ಮ ತಮ್ಮ ಧರ್ಮವನ್ನು ಶಾಂತಿ ಹಾಗೂ ಸಹಬಾಳ್ವೆಯಿಂದ ಆಚರಿಸಲು ಪೂರಕವಾಗಿರಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ತಿಳಿಸಿದ್ದಾರೆ.
ಬೆಂಗಳೂರಿನ ಗೃಹಕಚೇರಿಯಲ್ಲಿ ಕ್ರೈಸ್ತ ಸಮುದಾಯದ ಮುಖಂಡರು ಗೃಹ ಸಚಿವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರ ತರಲುದ್ದೇಶಿಸಿರುವ ಮತಾಂತರ ನಿಷೇಧ ಕಾಯಿದೆಯ ಬಗ್ಗೆ ಚರ್ಚಿಸಿದರು. ಕ್ರೈಸ್ತ ಧರ್ಮ ಪ್ರಚಾರಕ್ಕೆ ತೊಡಕುಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಗೃಹ ಸಚಿವರು, ಪ್ರಸ್ತಾವಿತ ಮತಾಂತರ ನಿಷೇಧ ಕಾಯಿದೆ ಯಾವುದೇ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಕಾಯ್ದೆಯಲ್ಲ. ಸಮಗ್ರ ಸಾಮಾಜಿಕ ಹಿತಾಸಕ್ತಿ ಹಾಗೂ ಎಲ್ಲಾ ಧರ್ಮೀಯರು ತಮ್ಮ ತಮ್ಮ ಧರ್ಮವನ್ನು ಶಾಂತಿ ಹಾಗೂ ಸಹಬಾಳ್ವೆಯಿಂದ ಆಚರಿಸಲು ಪೂರಕವಾಗಿರಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ಗೃಹ ಸಚಿವರಿಗೆ ಧನ್ಯವಾದ ಅರ್ಪಿಸಿದ ಮುಖಂಡರು, ಬಲವಂತವಾಗಿ ಮಾಡಲಾಗುವ ಮತಾಂತರಕ್ಕೆ ತಮ್ಮದೂ ವಿರೋಧವಿದೆ ಎಂದು ತಿಳಿಸಿದರು.