ಬೆಂಗಳೂರು : ಮಕ್ಕಳ ಅಭಿರಕ್ಷೆ ಎಂಬುದು ಧರ್ಮ ಹಾಗೂ ನಂಬಿಕೆಗಳನ್ನು ಮೀರಿದ ಸಂಕೀರ್ಣ ವಿಚಾರ. ಅದರಲ್ಲೂ ವಿಚ್ಛೇದನ ಹೊಂದಿದ ದಂಪತಿ ಪ್ರತ್ಯೇಕವಾಗಿ ವಾಸವಿದ್ದಾಗ ಮಗುವಿನ ಪಾಲನೆ ಪೋಷಣೆಗೆ ತಾಯಿಯೇ ಸೂಕ್ತ. ಜತೆಗೆ ಮಗುವಿನ ಪಾಲನೆ ತಾಯಿಗೆ ಸೇರಿದ ಹಕ್ಕು. ಮಲತಾಯಿ ಮಡಿಲಿಗೆ ಮಗುವನ್ನು ಒಪ್ಪಿಸುವುದು ಸಮರ್ಥನೀಯಮವಲ್ಲ’ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿದ್ಯಾವಂತ ಮತ್ತು ಶ್ರೀಮಂತ ಮುಸ್ಲಿಂ ದಂಪತಿಯ ವಿಚ್ಛೇದನ ಪ್ರಕರಣವೊಂದರಲ್ಲಿ ಮಗುವನ್ನು ತನ್ನೊಟ್ಟಿಗೇ ಇರಿಸಿಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಬೆಂಗಳೂರಿನ ಮಹಮ್ಮದ್ ಮುಷ್ತಾಕ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ ಕುರಾನ್ನ ಪದ್ಯಗಳನ್ನು ಉಲ್ಲೇಖಿಸಿದ್ದು, ಪ್ರವಾದಿ ಮೊಹಮ್ಮದರು ‘ಮಗು ತಾಯಿ ಬಳಿ ಇರುವುದೇ ಕ್ಷೇಮ. ತಾಯಿಯ ಬಳಿಯೇ ಮಗು ಬೆಳೆಯಬೇಕು ಎಂಬುದನ್ನು ಆ ಕಾಲಕ್ಕೇ ಹೇಳಿದ್ದಾರೆ. ವಿಚ್ಛೇದನ ಕೋರಿದ ಬಳಿಕ ಪತ್ನಿ ಮೊಹಮ್ಮದೀಯ ಕಾನೂನು ಪ್ರಕಾರ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಮಗು ಅವರ ಬಳಿಯಲ್ಲೇ ಹೆಚ್ಚು ಸುರಕ್ಷಿತ ಭಾವನೆಯಲ್ಲಿದೆ. ಆದ್ದರಿಂದ ಮಗುವನ್ನು ಹೆತ್ತ ತಾಯಿಯೇ ಪೋಷಿಸಬೇಕು ಎಂದು ಆದೇಶಿಸಿದೆ.
ಅಲ್ಲದೇ ಅರ್ಜಿ ಸಲ್ಲಿಸಿದ್ದ ಪತಿಗೆ 50 ಸಾವಿರ ದಂಡ ವಿಧಿಸಿರುವ ಪೀಠ, ದಂಡದ ಮೊತ್ತವನ್ನು ಒಂದು ತಿಂಗಳೊಳಗೆ ಪತ್ನಿಗೆ ನೀಡಬೇಕು. ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ ಮಗುವಿನ ಭೇಟಿಗೆ ಕಲ್ಪಿಸಿರುವ ಅವಕಾಶವನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಹಾಗೆಯೇ, ದಂಪತಿ ನಡುವೆ ಬಾಕಿ ಇರುವ ಎಲ್ಲ 8 ಪ್ರಕರಣಗಳನ್ನು ವಿಚಾರಣಾ ನ್ಯಾಯಾಲಯಗಳು ಮುಂದಿನ 9 ತಿಂಗಳೊಳಗೆ ಇತ್ಯರ್ಥಪಡಿಸಬೇಕು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಮೊಹಮ್ಮದ್ ಮುಷ್ತಾಕ್, ದಾವಣಗೆರೆಯ ಲೆಕ್ಕ ಪರಿಶೋಧಕಿ ಆಯೇಷಾ ಬಾನು ಅವರನ್ನು 2009ರ ಏಪ್ರಿಲ್ 30ರಂದು ವರಿಸಿದ್ದರು. ಕೆಲಕಾಲ ಅಮೆರಿಕದಲ್ಲಿ ನೆಲೆಸಿದ್ದ ದಂಪತಿಗೆ 2013ರಲ್ಲಿ ಗಂಡು ಮಗು ಜನಿಸಿತ್ತು. ಬಳಿಕ ದಂಪತಿ ನಡುವೆ ಮನಸ್ತಾಪ ಏರ್ಪಟ್ಟು ಸದ್ಯ ವಿವಾಹ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದು, ವಿವಿಧ ನ್ಯಾಯಾಲಯಗಳಲ್ಲಿ 8 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಅರ್ಜಿದಾರ ಮೊಹಮ್ಮದ್ ಮುಷ್ತಾಕ್ ಮತ್ತೊಂದು ಮದುವೆಯಾಗಿದ್ದು, ಎರಡನೇ ಹೆಂಡತಿಗೆ ಹೆಣ್ಣು ಮಗುವಿದೆ.
ವಿಚ್ಛೇದನದ ಅರ್ಜಿ ದಾಖಲಾದ ಬಳಿಕ ಅಯೇಷಾ ಬಾನು ಮಗನನ್ನು ಪೋಷಿಸುತ್ತಿದ್ದಾರೆ. ಇದಕ್ಕೆ ಆಕ್ಷೇಪಿಸಿರುವ ಪತಿ, ಆಯೇಷಾ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ನಾನು ಸಾಕಷ್ಟು ಸ್ಥಿತಿವಂತನಿದ್ದು ಮಗನಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ. ಸಂಪೂರ್ಣ ಕುಟುಂಬದ ಪರಿಸರದಲ್ಲಿ ಅವನನ್ನು ಬೆಳೆಸುತ್ತೇನೆ. ಆದ್ದರಿಂದ ಮಗನನ್ನು ನನ್ನ ಬಳಿ ಇರಿಸಿಕೊಳ್ಳಲು ನಿರ್ದೇಶಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮನವಿ ತಿರಸ್ಕರಿಸಿದ್ದ ಕೋರ್ಟ್, ಪ್ರತಿ ತಿಂಗಳ 1 ಮತ್ತು 3ನೇ ಶನಿವಾರ ಮಗನನ್ನು ನಾಲ್ಕು ಗಂಟೆ ಕಾಲ ಭೇಟಿಯಾಗಲು ಅವಕಾಶ ಕಲ್ಪಿಸಿತ್ತು. ಈ ಹಿನ್ನೆಲೆ ಮಗುವನ್ನು ತನ್ನ ಬಳಿಯೇ ಇರಿಸಿಕೊಳ್ಳಲು ಹೈಕೋರ್ಟ್ ಮೆಟ್ಟಿಲೇರಿದ್ದರು.