ಬೆಂಗಳೂರು: ಇನ್ಮುಂದೆ ಕೊರೊನಾ ತಪಾಸಣೆಗೆ ಮೊಬೈಲ್ ಓಟಿಪಿ ಅಥವಾ ಬೇರೆ ಯಾವುದಾದರೂ ಅಧಿಕೃತ ದಾಖಲಾತಿ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಪೂರ್ವ, ಪಶ್ಚಿಮ ಮತ್ತು ಯಲಹಂಕ ವಲಯಗಳ ಕೊರೊನಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಭೆ ನಡೆಸಿದರು.
ಬೆಂಗಳೂರಿನಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಸಿಎಂ ಸೂಚನೆ ನೀಡಿದರು. ಹೆಚ್ಚು ಹೆಚ್ಚು ಪರೀಕ್ಷೆ ಮಾಡಬೇಕು. 24 ಗಂಟೆಯೊಳಗೆ ವರದಿ ಬರುವಂತೆ ಮಾಡಬೇಕು. ವಾರ್ಡ್ಗಳಲ್ಲಿ ಕೋವಿಡ್-19 ಕುರಿತು ಮಾಹಿತಿ ನೀಡುವ ಜಾಹೀರಾತು ಫಲಕಗಳನ್ನು ಹಾಕಬೇಕು. ಕುಂಟು ನೆಪ ಹೇಳಿ ಕೆಲಸಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಖಡಕ್ ಆಗಿ ಹೇಳಿದರು.
ನಿನ್ನೆಯಂತೆಯೇ 5-T ಟಾರ್ಗೆಟ್ ಫಿಕ್ಸ್ ಮಾಡಿದ ಮುಖ್ಯಮಂತ್ರಿ ಅವರು, ನಿಮ್ಮ ನಿಮ್ಮ ವಲಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕು. ಟಾರ್ಗೆಟ್ ರೀಚ್ ಆಗಲೇಬೇಕು ಎಂದು ತಾಕೀತು ಮಾಡಿದರು. ನಿಮ್ಮ ವಲಯಗಳ ಪ್ರಗತಿ ಬಗ್ಗೆ ಪ್ರತಿ ವಾರ ನನಗೆ ಮಾಹಿತಿ ನೀಡಬೇಕೆಂದು ನಿರ್ದೇಶನ ನೀಡಿದರು.
ಕೆಲವು ಕಡೆ ಕೊರೊನಾ ತಪಾಸಣೆ ಮಾಡಿಸಿಕೊಳ್ಳುವ ಶಂಕಿತರು ತಮ್ಮ ಮೊಬೈಲ್ ನಂಬರ್ ತಪ್ಪಾಗಿ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗಾಗಿ ಪ್ರತಿಯೊಬ್ಬರ ಪರೀಕ್ಷೆಗೂ ಮುನ್ನ ಮೊಬೈಲ್ ಓಟಿಪಿ ಅಥವಾ ಬೇರೆ ರೀತಿಯ ದಾಖಲಾತಿಗಳನ್ನು ಪಡೆಯುವಂತೆ ಸಿಎಂ ಸೂಚನೆ ನೀಡಿದರು.