ಬೆಂಗಳೂರು: 'ಇಲ್ಲ ಸ್ವಾಮಿ, ನಾವು ಯಾರಿಂದಲೂ ಯಾವ ಹಣವನ್ನೂ ಪಡೆದಿಲ್ಲ. ಅವರು ಹೇಳುವುದೆಲ್ಲ ಶುದ್ಧ ಸುಳ್ಳು. ಅವರಿಗೆ ಧೈರ್ಯ ಇದ್ದರೆ ನಮ್ಮೆದುರಿಗೆ ಬಂದು ಹೇಳಲಿ, ನಾವು ಉತ್ತರ ಕೊಡುತ್ತೇವೆ' ಎಂದು ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ಯೆಯಾದ ಚಂದ್ರು ಅಜ್ಜಿ ಮಾರಿಯಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರು ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಿನ್ನೆ ಶಾಸಕ ಜಮೀರ್ ಅಹಮ್ಮದ್ ಸೈಮನ್‌ರಾಜ್‌ಗೆ 5 ಲಕ್ಷ ರೂ ಕೊಟ್ಟು ಬಿಜೆಪಿಯವರು ಸುಳ್ಳು ಹೇಳಿಸಿದ್ದಾರೆ ಎಂದು ಆರೋಪಿಸಿದ್ದರು. ಎಫ್‌ಐಆರ್‌ನಲ್ಲೇಕೆ ಉರ್ದು ವಿಚಾರ ಹೇಳಿರಲಿಲ್ಲ?. ಹಣ ಪಡೆದು ಯಾವ ರೀತಿ ಹೇಳಿಕೆ ನೀಡಿದ್ದಾನೆಂಬುದು ನನಗೆ ಗೊತ್ತಿದೆ ಎಂದಿದ್ದರು.
ಉರ್ದುವಿನಲ್ಲಿ ಮಾತನಾಡದಿದ್ದಕ್ಕೆ ಮುಸ್ಲಿಂ ಯುವಕರೊಂದಿಗೆ ಜಗಳವಾಗಿದೆ. ನಮ್ಮವರು ಸಿಸಿಟಿವಿ ನೋಡಿದ ಮೇಲೆ ಗೊತ್ತಾಗಿದೆ. ಅಂಗಡಿಗೆ ಹೋದಾಗ ಗಾಡಿ ಕೂಡ ಟಚ್ ಆಗಿಲ್ಲ. ನಮ್ಮ ಮಗನನ್ನು ಕಳೆದುಕೊಂಡು ನಮಗೆ ಹೊಟ್ಟೆ ಉರಿಯುತ್ತಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಚಂದ್ರು ಸಹೋದರ ಮಾತನಾಡಿ, ನಾವು ಯಾರಿಂದಲೂ ಒಂದು ಪೈಸೆಯನ್ನೂ ಪಡೆದಿಲ್ಲ. ಆರೋಪಿಗಳು ಬೇಕಂತಲೇ ಗಲಾಟೆ ತೆಗೆದು ಚಂದ್ರುವಿಗೆ ಚುಚ್ಚಿ ಸಾಯಿಸಿದ್ದಾರೆ. ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದರು.
ಇದನ್ನೂ ಓದಿ: ಯಾವುದೇ ವೃತ್ತಿ ಬಗ್ಗೆ ಯಾರೂ ಕೇವಲವಾಗಿ ಮಾತ್ನಾಡಬಾರದು : ಸಚಿವ ಡಾ. ಸುಧಾಕರ್