ಬೆಂಗಳೂರು: ಹಗಲಿನಲ್ಲಿ ತರಕಾರಿ ವ್ಯಾಪಾರ ಮಾಡಿ, ರಾತ್ರಿಯಾಗುತ್ತಿದ್ದಂತೆ ಕೆಟ್ಟ ಚಟಕ್ಕೆ ದಾಸನಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಮನೋಜ್ ಎಂಬ ಬಂಧಿತ ಆರೋಪಿ. ಈತ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವ ಸೋಗಿನಲ್ಲಿ, ಮನೆ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿರುವುದನ್ನು ಗಮನಿಸುತ್ತಿದ್ದ. ನಂತರ ಕತ್ತಲಾದ ಮೇಲೆ ವಾಪಸ್ ಬಂದು ಆ ಬೈಕ್ಅನ್ನು ಎಗರಿಸುತ್ತಿದ್ದ. ಪ್ರಕರಣದ ಜಾಡು ಹಿಡಿದ ಪೊಲೀಸರು ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗ್ಗೆ ವಾಹನಗಳ ತಪಾಸಣೆ ಮಾಡುವ ವೇಳೆ ಅನುಮಾನಗೊಂಡ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ತಡ ರಾತ್ರಿ ಬೈಕ್ ಕದಿಯುತ್ತಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾನೆ. ಕಳೆದ ವರ್ಷ ಕೂಡ 12 ಬೈಕ್ ಕದ್ದು ಜೈಲಿಗೆ ಹೋಗಿ ಬಂದಿದ್ದು, ಚಾಮರಾಜಪೇಟೆ ಠಾಣೆಯ ಪೊಲೀಸರೇ ಬಂಧಿಸಿ ಜೈಲಿಗಟ್ಟಿದ್ದರು. ಅಪರಾಧ ಪ್ರಕರಣದಲ್ಲಿ ಭಾಗಿಯಾಗಬೇಡ ಎಂದು ತಾಯಿ ಎಷ್ಟೇ ಬುದ್ಧಿ ಮಾತು ಹೇಳಿದರೂ ಗಾಂಜಾ, ಡ್ರಗ್ಸ್, ಕುಡಿಯುವ ಚಟಕ್ಕೆ ದಾಸನಾಗಿದ್ದ ಈತ ಬೈಕ್ ಕಳ್ಳತನ ಮಾಡುತ್ತಿದ್ದ. ಇದರಿಂದ ಬಂದ ಹಣವನ್ನು ದುಶ್ಚಟಗಳಿಗೆ ಬಳಸುತ್ತಿದ್ದ ಎನ್ನಲಾಗ್ತಿದೆ.
ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ:
ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ 22 ವರ್ಷದ ಮನೋಜ್ನನ್ನು ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಎಸ್.ಲೋಕಾಪುರ ನೇತೃತ್ವದಲ್ಲಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಯು ನಗರದ ಚಾಮರಾಜಪೇಟೆ, ವಿದ್ಯಾರಣ್ಯಪುರ, ಗಿರಿನಗರ, ತಿಲಕನಗರ, ಜೆಜೆ ನಗರ, ಬನಶಂಕರಿ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡಿರುವ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಮಾಹಿತಿ ಆಧರಿಸಿ ಆರೋಪಿಯಿಂದ 3,40,000 ರೂ. ಬೆಲೆ ಬಾಳುವ 7 ದ್ವಿಚಕ್ರ ವಾಹನಗಳನ್ನು ಚಾಮರಾಜಪೇಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.