ಬೆಂಗಳೂರು : ಯಾವುದೇ ದೇಶದ ಪ್ರಗತಿಯಲ್ಲಿ ಬ್ಯಾಂಕುಗಳ ಪಾತ್ರ ದೊಡ್ಡದಾಗಿದೆ. ಬ್ಯಾಂಕ್ಗಳ ಉಳಿವಿಗೆ ಠೇವಣಿದಾರರ ಹಿತಾಸಕ್ತಿ ಕಾಪಾಡುವುದು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ದೇಶದ ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿ ಬ್ಯಾಂಕ್ಗಳ ದಿವಾಳಿಯಿಂದಾಗಿ ನಷ್ಟ ಅನುಭವಿಸಿದ ಠೇವಣಿದಾರರಿಗೆ ಹಣ ವಾಪಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲು ಸಂಪೂರ್ಣ ವಿಶ್ವಾಸದೊಂದಿಗೆ ಮುಂದೆ ಬರಬೇಕು. ಹಾಗಾಗಬೇಕಾದರೆ, ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಠೇವಣಿದಾರರ ಹಣಕ್ಕೆ ಬ್ಯಾಂಕ್ಗಳು ಸುರಕ್ಷತೆ ಒದಗಿಸಬೇಕು ಎಂದು ತಿಳಿಸಿದರು.
![ಠೇವಣಿದಾರರಿಗೆ ಹಣ ವಾಪಸ್ ಚೆಕ್ ನೀಡಿದ ಪ್ರಧಾನಿ ನರೇಂದ್ರ ಮೋದಿ](https://etvbharatimages.akamaized.net/etvbharat/prod-images/13885947_488.jpg)
ಬ್ಯಾಂಕ್ಗಳ ದಿವಾಳಿ ಸಂದರ್ಭದಲ್ಲಿ ಠೇವಣಿದಾರರ ಹಣ ಮರುಪಾವತಿ ಪ್ರಕ್ರಿಯೆ ಬಹಳಷ್ಟು ವಿಳಂಬವಾಗುತ್ತಿದೆ. ಇದರಿಂದ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ಡೆಪಾಸಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್) ಆ್ಯಕ್ಟ್ಗೆ ತಿದ್ದುಪಡಿಯನ್ನು ಸೆಪ್ಟೆಂಬರ್ 1, 2021ರಿಂದ ಜಾರಿಗೆ ಬರುವಂತೆ ಕ್ರಮವಹಿಸಲಾಗಿದೆ ಎಂದರು.
ತಿದ್ದುಪಡಿ ಬಳಿಕ ಈ ಹಿಂದೆ ಫೆಬ್ರವರಿ 2020ರಲ್ಲಿ ಠೇವಣಿದಾರರು ಎದುರಿಸುತ್ತಿದ್ದ ತೊಂದರೆಗಳಿಗೆ ಠೇವಣಿದಾರರ ಠೇವಣಿ ವಿಮಾ ರಕ್ಷಣೆಯನ್ನು ಮುಂಚೆಯಿದ್ದ 1,00,000 ರೂಪಾಯಿಗಳಿಂದ 5,00,000 ರೂಪಾಯಿಗಳಿಗೆ ಹೆಚ್ಚಿಸಿ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲೇ ಮಹತ್ತರ ಬದಲಾವಣೆ ತರಲಾಗಿದೆ ಎಂದರು.
ಈಗ ಸರಳ ಸುಲಭವಾಗಿ ಮತ್ತು ಸಮಯಕ್ಕೆ ಸರಿಯಾಗಿ ಠೇವಣಿದಾರರು ತಮ್ಮ ಠೇವಣಿಗಳಿಗೆ,ಠೇವಣಿ ವಿಮಾ ರಕ್ಷಣೆ (₹5 ಲಕ್ಷಗಳವರೆಗೆ) ಮಧ್ಯಂತರ ಪಾವತಿ ಮೂಲಕ DICGCಯಿಂದ ನಿಗದಿಪಡಿಸಿದ ಕೇವಲ 90 ದಿನಗಳ ಸಮಯದ ಅಂತರದಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
33 ಸಾವಿರ ಠೇವಣಿದಾರರಿಗೆ 753.61 ಕೋಟಿ ವಾಪಸ್ : ಪ್ರಲ್ಹಾದ್ ಜೋಶಿ
ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನಗರದ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ನ ಸುಮಾರು 33 ಸಾವಿರ ಠೇವಣಿದಾರರ ಕ್ಲೇಮುಗಳಿಗೆ ಠೇವಣಿ ವಿಮಾ ರಕ್ಷಣೆ ಕಾಯ್ದೆಯಡಿ 753.61 ಕೋಟಿಗಳ ರೂಪಾಯಿ ಹಣವನ್ನು ಖಾತೆಗೆ ವಾಪಸ್ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
![ಬೆಂಗಳೂರಿನಲ್ಲಿ ಠೇವಣಿದಾರರಿಗೆ ಚೆಕ್ ವಿತರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ](https://etvbharatimages.akamaized.net/etvbharat/prod-images/13885947_1089.jpg)
ದೇಶದಲ್ಲಿ ವಿವಿಧ ಬ್ಯಾಂಕುಗಳಲ್ಲಿ 1-5 ಲಕ್ಷದವರೆಗಿನ ಹಣದ ಠೇವಣಿಯಲ್ಲಿ ಶೇ.98.1ರಷ್ಟು ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಜೊತೆಗೆ, ಬಾಗಲಕೋಟೆಯ ಮುಧೋಳ್ ಕೋ-ಆಪರೇಟೀವ್ ಬ್ಯಾಂಕ್, ವಿಜಯಪುರದ ಡೆಕ್ಕನ್ ಅರ್ಬನ್ ಕೋ-ಆಪರೇಟೀವ್ ಬ್ಯಾಂಕ್, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಿಲ್ಲಾತ್ ಕೋ- ಆಪರೇಟೀವ್ ಬ್ಯಾಂಕ್ಗಳ 77819 ಠೇವಣಿದಾರರು ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮದ ಫಲಾನುಭವಿಗಳಾಗಿ ತಮ್ಮ ಕ್ಲೇಮುಗಳಿಗೆ ಹಣ ಮರುಪಾವತಿ ಪಡೆಯಲಿದ್ದಾರೆ ಎಂದ ತಿಳಿಸಿದರು.
ಬೆಂಗಳೂರಿನಲ್ಲಿರುವ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಮತ್ತು ಕರ್ನಾಟಕದಲ್ಲಿ 5 ಕೇಂದ್ರಗಳಲ್ಲಿರುವ ಇತರ ನಾಲ್ಕು ಯುಸಿಬಿಗಳು ದಿವಾಳಿಯಾದ ನಂತರ ಕೇಂದ್ರ ಸರ್ಕಾರ ತನ್ನ ಗ್ರಾಹಕರಿಗೆ ಡಿಐಸಿಜಿಸಿ ಕ್ಲೈಮ್ ಮೊತ್ತವನ್ನು ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ಬಿಡುಗಡೆ ಮಾಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಇದನ್ನೂ ಓದಿ: Omicron ರೂಪಾಂತರಿಗೆ ಬೆಚ್ಚಿಬಿದ್ದ ಆರೋಗ್ಯ ವಲಯ : ಬೂಸ್ಟರ್ ಡೋಸ್ ನೀಡಲು ಹೆಚ್ಚಿದ ಒತ್ತಾಯ
ಸಾಂಕೇತಿಕವಾಗಿ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ನ ಕೆಲವು ಠೇವಣಿದಾರರಿಗೆ ಕೇಂದ್ರ ಸಚಿವರು ಹಾಗೂ ನೆರೆದ ಇತರೆ ಗಣ್ಯರು ಹಣ ಮರುಪಾವತಿ ಚೆಕ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ. ಸಿ ಮೋಹನ್, ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ, ಜಿಲ್ಲಾಧಿಕಾರಿ ಜೆ ಮಂಜುನಾಥ್, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ ಸೇರಿದಂತೆ ಬ್ಯಾಂಕುಗಳ ಅಧಿಕಾರಿಗಳು, ಠೇವಣಿದಾರರು ಉಪಸ್ಥಿತರಿದ್ದರು.