ಬೆಂಗಳೂರು: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ತಡರಾತ್ರಿ 1:20ರ ಸುಮಾರಿಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು. ನಗರದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ರಾಜ್ಯದ ಸಚಿವರುಗಳಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಡಾ.ಅಶ್ವತ್ ನಾರಾಯಣ್, ವಿ ಸೋಮಣ್ಣ, ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ ಸೇರಿದಂತೆ ಅನೇಕ ಗಣ್ಯರು ಆತ್ಮೀಯವಾಗಿ ಬರಮಾಡಿಕೊಂಡರು.
ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ ಅವರು ಬೆಳಗ್ಗೆ 11 ಗಂಟೆಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವ 'ಸಂಕಲ್ಪ ಸಿದ್ಧಿ' 3ನೇ ಆವೃತ್ತಿಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಯಲಹಂಕದ ಮದರ್ ಡೈರಿಗೆ ಭೇಟಿ ನೀಡಲಿದ್ದು, ಬಳಿಕ ಡೈರಿ ಸರ್ಕಲ್ ಬಳಿ ಇರುವ ಕೆಎಂಎಫ್ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ 2 ಗಂಟೆವರೆಗೆ ಅಮಿತ್ ಶಾ ಸಮಯ ಮೀಸಲಿರಿಸಿದ್ದು, ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡುವ ಸಾಧ್ಯತೆ ಇದೆ. ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ಕಟೀಲ್ ಲಂಚ್ ಮೀಟ್ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ನಂತರ ಕಾರ್ಯಕರ್ತರ ಆಕ್ರೋಶ, ಸಂಪುಟ ವಿಸ್ತರಣೆ ಕುರಿತ ವಿಚಾರಗಳ ಕುರಿತು ಈ ವೇಳೆ ಮಾತುಕತೆ ನಡೆಯಬಹುದು ಎನ್ನಲಾಗಿದೆ.
ಕೇಂದ್ರ ಗೃಹ ಸಚಿವರು ಇಂದು ಮೂರು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಧ್ಯಾಹ್ನದ ನಂತರ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
(ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್: ಹೈಜಂಪ್, ಸ್ಕ್ವ್ಯಾಷ್ನಲ್ಲಿ ಐತಿಹಾಸಿಕ ಕಂಚು, ಜುಡೋದಲ್ಲಿ ಮೂರನೇ ಪದಕ)