ಬೆಂಗಳೂರು: ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆಗೆ ಕೇಂದ್ರ ಕೃಷಿ ಸಚಿವ ಒಪ್ಪಿಗೆ ಸೂಚಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅಡಕೆ ನಿಷೇಧ ಮಾಡುವ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದೇ ವಿಚಾರವಾಗಿ ಸಂಸದರು ಮತ್ತು ಸಚಿವರೊಬ್ಬರು ಹೇಳಿಕೆ ಸಹ ಕೊಟ್ಟಿದರು.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಅಡಕೆ ಟಾಸ್ಕ್ ಫೋರ್ಸ್‌ನವರು ದೆಹಲಿಗೆ ತೆರಳಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿದ್ದರು. ಈ ವೇಳೆ, ಅಡಕೆ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂಬ ಬಗ್ಗೆ ಹೇಳಿಕೆ ನೀಡದಂತೆ ಮನವಿ ಮಾಡಲಾಗಿದೆ. ಇದರಿಂದ ಅಡಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮನವರಿಕೆ ಮಾಡಿದ್ದು, ಇದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಯಾರೂ ಅಡಿಕೆ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಬಾರದು. ಇದರಿಂದ ಅಡಕೆ ಬೆಳೆಗಾರರಿಗೆ ತೊಂದರೆಯಾಗಲಿದೆ. ಅಡಕೆ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸವಾಗಲಿದೆ. ಇದರಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಡಕೆ ಬೆಳೆಗಾರರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಜೊತೆಗೆ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಯುಪಿಎ ಸರ್ಕಾರ ಇದ್ದಾಗ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ ಮಾಡಿತ್ತು. ಈಗ ಆ ಅಫಿಡವಿಟ್ ತೆರವು ಮಾಡಲು ಕರ್ನಾಟಕ ಸರ್ಕಾರ ಪ್ರಯತ್ನ ಮಾಡುತ್ತಿದೆ. ಇತ್ತ ಎಂ.ಎಸ್.ರಾಮಯ್ಯ ವೈದ್ಯಕೀಯ ಸಂಸ್ಥೆ ಅಡಕೆ ಹಾನಿಕಾರಕವಲ್ಲ ಎಂಬ ಬಗ್ಗೆ ಅಧ್ಯಯನ ನಡೆಸುತ್ತಿದೆ. ಇತ್ತ ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲು ಒಪ್ಪಿಕೊಂಡಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಶಕ್ತಿ ಬಂದ ಹಾಗೇ ಆಗಿದೆ. ರಾಜ್ಯ ಅಡಕೆ ಬೆಳೆಯುತ್ತಿರುವ ಪ್ರಮುಖ ರಾಜ್ಯವಾಗಿದೆ. ಸುಪ್ರೀಂಕೋರ್ಟ್ ನಲ್ಲೂ ಈ ಸಮಿತಿ ಅಡಕೆ ಹಾನಿಕಾರಕ ಅಲ್ಲ ಎಂಬ ಬಗ್ಗೆ ವರದಿ ಸಲ್ಲಿಕೆ ಮಾಡಲಿದೆ ಎಂದರು.
ಇದನ್ನೂ ಓದಿ: ತುಮಕೂರು ಬಸ್ ಅಪಘಾತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಆರಗ ಜ್ಞಾನೇಂದ್ರ