ಬೆಂಗಳೂರು : ಅಂಗಡಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 19 ಕೆಜಿ 800 ಗ್ರಾಂ ತೂಕದ ಬೆಳ್ಳಿ ಗಟ್ಟಿ ಹಾಗೂ ಶೀಟ್ಸ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದರ್ಶನ್ ಬೋತ್ರಾ (36) ಹಾಗೂ ಕುಂದನ್ ಸಿಂಗ್ (28) ಬಂಧಿತರು. ಕಬ್ಬನ್ ಪೇಟೆಯಲ್ಲಿರುವ ವರದರಾಜ್ ಪೆರುಮಾಳ್ ಎಂಬುವವರ ಸಿಲ್ವರ್ ವರ್ಕ್ ಶಾಪ್‌ನಲ್ಲಿ ಡಿಸೆಂಬರ್ 23ರಂದು ಆರೋಪಿಗಳು ಕಳ್ಳತನವೆಸಗಿದ್ದರು.
ಈ ಬಗ್ಗೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್. ಟಿ ಅವರು ಮಾತನಾಡಿ, ಅಂಗಡಿ ಮಾಲೀಕ ವರದರಾಜ್ ಪೆರುಮಾಳ್ ಅವರೊಂದಿಗೆ ಆರೋಪಿ ದರ್ಶನ್ ಬೋತ್ರಾ ಬೆಳ್ಳಿ ವ್ಯವಹಾರ ನಡೆಸುತ್ತಿದ್ದ. ಕಳ್ಳತನಕ್ಕೆ ಸಂಚು ರೂಪಿಸಿಕೊಂಡಿದ್ದ ದರ್ಶನ್ ಬೋತ್ರಾ, ಡಿಸೆಂಬರ್ 23ರಂದು ಬೆಳಗ್ಗೆ ವರದರಾಜ್ ಪೆರುಮಾಳ್ ಅವರು ಅಂಗಡಿಯಲ್ಲಿ ಇರದಿದ್ದಾಗ ತನ್ನಿಬ್ಬರು ಸಹಚರರೊಂದಿಗೆ ಬಂದಿದ್ದ ಎಂದಿದ್ದಾರೆ.
ಪರಿಚಿತ ವ್ಯಕ್ತಿಯಾಗಿದ್ದರಿಂದ ಅಂಗಡಿ ಸಿಬ್ಬಂದಿ ದರ್ಶನ್ ಬೋತ್ರಾನೊಂದಿಗೆ ಮಾತನಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಸಿಬ್ಬಂದಿಯ ಗಮನವನ್ನ ಬೇರೆಡೆ ಸೆಳೆದಿದ್ದ ಆರೋಪಿ, ತನ್ನ ಸಹಚರರ ಮೂಲಕ ಅಂಗಡಿಯಲ್ಲಿದ್ದ 19 ಕೆ.ಜಿ 800 ಗ್ರಾಂ ತೂಕದ ಬೆಳ್ಳಿಯ ಗಟ್ಟಿ ಕಳವು ಮಾಡಿಸಿದ್ದ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಇನ್ಸ್ಪೆಕ್ಟರ್ ಅವರು ತಂಡ ರಚಿಸಿ ಚೆನ್ನೈನ ಮಿಂಟ್ ಸ್ಟ್ರೀಟ್‌ನಲ್ಲಿ ತಲೆಮರೆಸಿಕೊಂಡಿದ್ದ ದರ್ಶನ್ ಬೋತ್ರಾ ಹಾಗೂ ಕುಂದನ್ ಸಿಂಗ್‌ನನ್ನ ಬಂಧಿಸಿದ್ದಾರೆ ಎಂದರು.
ಆರೋಪಿಗಳಿಂದ 10 ಲಕ್ಷ ರೂ ಮೌಲ್ಯದ 11 ಕೆಜಿ 933 ಗ್ರಾಂ ಬೆಳ್ಳಿಯನ್ನ ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಪರಸ್ಪರ ಕಲಹದಿಂದ ಮನೆ ತೊರೆದ ದಂಪತಿ: ಬಾಗಿಲು ಮುರಿದು ಚಿನ್ನಾಭರಣ ದೋಚಿದ ಕಳ್ಳನ ಬಂಧನ - THEFT CASE