ಬೆಂಗಳೂರು: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಪಿಆರ್ಆರ್ ಬ್ಯುಸಿನೆಸ್ ಕಾರಿಡಾರ್, ನೀರು ಸರಬರಾಜು ಸೇರಿ ಅನೇಕ ಪ್ರಮಖ ಯೋಜನೆ ಕೈಗೊಂಡಿದೆ. ಈ ಯೋಜನೆಗಳಿಗೆ 2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಅನುದಾನ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದಿದ್ದಾರೆ.
ಮುಂಬರುವ ಫೆಬ್ರವರಿ 1ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ಈ ಬಜೆಟ್ನಲ್ಲಿ ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾಗಿರುವ ಆರ್ಥಿಕ ಸಹಕಾರ ನೀಡುವಂತೆ ಡಿಸಿಎಂ ಮನವಿ ಮಾಡಿದ್ದಾರೆ.
ಬೆಂಗಳೂರು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಪ್ರಗತಿ ಹಾಗೂ ಬಂಡವಾಳ ಹೂಡಿಕೆ ಆಕರ್ಷಣೆಯ ತಾಣವಾಗಿ ಬೆಳೆಯುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಬೆಂಗಳೂರು ಜಾಗತಿಕ ನಗರವಾಗಿ ರೂಪುಗೊಂಡಿದ್ದು, ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸಿ, ಆರ್ಥಿಕ ಪ್ರಗತಿಗೆ ನೆರವಾಗಿದೆ. ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಪರಿಣಾಮ, ನಗರದ ಜನಸಂಖ್ಯೆ 1.50 ಕೋಟಿ ಸನಿಹದಲ್ಲಿದೆ. ಹೀಗಾಗಿ, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಮಾಡಿ ದೇಶದ ಸಿಲಿಕಾನ್ ವ್ಯಾಲಿ ಎಂಬ ಹಿರಿಮೆಯನ್ನು ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿದ್ದು, ಮುಂಬರುವ ಬಜೆಟ್ನಲ್ಲಿ ಈ ಯೋಜನೆಗಳಿಗೆ ಪೂರಕವಾಗಿ ಅನುದಾನ ನೀಡಬೇಕು ಎಂದು ತಿಳಿಸಿದ್ದಾರೆ.
ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ: ಭೂಮಿಯ ಕೊರತೆಯಿಂದಾಗಿ ಬೆಂಗಳೂರಿನಲ್ಲಿರುವ ಹಾಲಿ ರಸ್ತೆಗಳ ಅಗಲೀಕರಣ ಕಷ್ಟವಾಗಿದೆ. ಹೀಗಾಗಿ, ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಹೆಚ್ಎಸ್ಆರ್ ಬಡಾವಣೆಯ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೂ ಉತ್ತರ - ದಕ್ಷಿಣ 18.5 ಕಿ.ಮೀ. ಟನಲ್ ರಸ್ತೆ ನಿರ್ಮಾಣಕ್ಕೆ ₹15 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ವಿವರಿಸಿದ್ದಾರೆ.
ಕೆ.ಆರ್.ಪುರ ವೃತ್ತದಿಂದ ನಾಯಂಡನಹಳ್ಳಿ ಜಂಕ್ಷನ್ವರೆಗೂ 28.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ₹25 ಸಾವಿರ ಕೋಟಿ ವೆಚ್ಚವಾಗಲಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ₹19 ಸಾವಿರ ಕೋಟಿ ಮೌಲ್ಯದ ಡಿಪಿಆರ್ ಸಿದ್ಧಪಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ.
ಮೆಟ್ರೋ ಸೇರಿದಂತೆ ಎಲಿವೆಟೆಡ್ ಕಾರಿಡಾರ್ (ಡಬಲ್ ಡೆಕ್ಕರ್ ಮೇಲ್ಸೇತುವೆ): ನಮ್ಮ ಮೆಟ್ರೋದ ಮೂರನೇ ಹಂತದ ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೂ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಮೇಲ್ಸೇತುವೆ ಯಶಸ್ವಿ ಹಿನ್ನೆಲೆಯಲ್ಲಿ ಮೆಟ್ರೋ ನಾಲ್ಕನೇ ಹಂತದ ಯೋಜನೆಯನ್ನು ಡಬಲ್ ಡೆಕ್ಕರ್ ಮೂಲಕ ನಿರ್ಮಿಸಲು ತೀರ್ಮಾನಿಸಲಾಗಿದೆ. ಜೆ.ಪಿ.ನಗರದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೂ 45 ಕಿ.ಮೀ ಉದ್ದದ ಈ ಮಾರ್ಗಕ್ಕೆ ಹೆಚ್ಚುವರಿಯಾಗಿ ₹8916 ಕೋಟಿ ಅಗತ್ಯವಿದೆ ಎಂದಿದ್ದಾರೆ.
7 ಮೇಲ್ಸೇತುವೆ, 300 ಕಿ.ಮೀ ಬಫರ್ ವಲಯ ರಸ್ತೆ: ಜೊತೆಗೆ, ನಗರದ ಸಂಚಾರಿ ದಟ್ಟಣೆ ಇರುವ 11 ಜಂಕ್ಷನ್ಗಳಲ್ಲಿ 99.50 ಕಿ.ಮೀ.ಗಳಷ್ಟು ದೂರ 17 ಮೇಲ್ಸೇತುವೆ ನಿರ್ಮಾಣದ ಅಗತ್ಯವಿದ್ದು, ಇದಕ್ಕಾಗಿ ₹12 ಸಾವಿರ ಕೋಟಿ ಹಣ ಬೇಕಾಗಿದೆ. ಪ್ರಮುಖ ನದಿ ಹಾಗೂ ದೊಡ್ಡ ಕೆರೆಗಳು ಹಾಗೂ ರಾಜಕಾಲುವೆ ಪಕ್ಕದ ಬಫರ್ ಪ್ರದೇಶಗಳನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ಈ ಬಫರ್ ವಲಯದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ₹3000 ಕೋಟಿ ಅಗತ್ಯವಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ರಾಜ್ಯದ ಪ್ರಪ್ರಥಮ ರಾಜಕಾಲುವೆ ಗ್ರೀನ್ ಮೊಬಿಲಿಟಿ ಕಾರಿಡಾರ್ ಮಾರ್ಚ್ ಅಂತ್ಯಕ್ಕೆ ಪೂರ್ಣ: ಏನಿದರ ವಿಶೇಷತೆ?
ಪಿಆರ್ಆರ್ ಹಾಗೂ ನೀರು ಸರಬರಾಜು ಯೋಜನೆ: ಬೆಂಗಳೂರಿನ ದಟ್ಟಣೆ ನಿಯಂತ್ರಿಸಲು ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 8 ಪಥಗಳ, 73.04 ಕಿ.ಮೀ ಉದ್ದದ ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ. ಈ ಯೋಜನೆಯಲ್ಲಿ ₹21 ಸಾವಿರ ಕೋಟಿ ಭೂಸ್ವಾಧೀನ ಹಾಗೂ ₹6 ಸಾವಿರ ಕೋಟಿ ರಸ್ತೆ ನಿರ್ಮಾಣಕ್ಕೆ ಸೇರಿ ಒಟ್ಟು ₹27 ಸಾವಿರ ಕೋಟಿ ಅಗತ್ಯವಿದೆ. ಕಾವೇರಿ 5ನೇ ಹಂತದ ಕುಡಿಯುವ ನೀರಿನ ಪೂರೈಕೆ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆ ಪೂರ್ಣಗೊಳಿಸಲಾಗಿದ್ದು, ಹೆಚ್ಚುವರಿ ಬೇಡಿಕೆ ಪೂರೈಸಲು ಕಾವೇರಿ 6ನೇ ಹಂತದ ಯೋಜನೆ ಮೂಲಕ 2028ರ ವೇಳೆಗೆ 500 ಎಂಎಲ್ಡಿ ನೀರು ಪೂರೈಸುವ ಉದ್ದೇಶವಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಾವುಗಳು ಬೆಂಗಳೂರಿನ ಈ ಪ್ರಮುಖ ಯೋಜನೆಗಳಿಗೆ ಕೇಂದ್ರ ಬಜೆಟ್ನಲ್ಲಿ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.