ಬೆಂಗಳೂರು : ಅಣೆಕಟ್ಟೆಗಳ ಪುನಶ್ಚೇತನ ಹಾಗೂ ಸುಧಾರಣಾ ಯೋಜನೆಗಳ ಅನುದಾನದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ 756 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಿದೆ.
ಕೇಂದ್ರ ಜಲಶಕ್ತಿ ಆಯೋಗ ದೇಶದ ಪ್ರಮುಖ ಅಣೆಕಟ್ಟೆಗಳ ಸಬಲೀಕರಣಕ್ಕಾಗಿ ವಿಶ್ವ ಬ್ಯಾಂಕ್ ನೆರವಿನ ಡಿಪ್ (ಡ್ಯಾಮ್ ರಿಹ್ಯಾಬಿಲಿಟೇಶನ್ ಅಂಡ್ ಇಂಪ್ರೂವ್‌ಮೆಂಟ್ ಪ್ರಾಜೆಕ್ಟ್) ಯೋಜನೆಯಡಿ ತುಂಗಭದ್ರಾ, ನಾರಾಯಣಪುರ ಮತ್ತು ಕೆಆರ್‌ಎಸ್ ಡ್ಯಾಂ ಸೇರಿದಂತೆ 52 ಅಣೆಕಟ್ಟೆಗಳ ಪುನಶ್ಚೇತನಕ್ಕಾಗಿ ರಾಜ್ಯ ಜಲಸಂಪನ್ಮೂಲ ಇಲಾಖೆ 1500 ಕೋಟಿ ರೂ. ಅನುದಾನದ ಬೇಡಿಕೆ ಇಟ್ಟಿತ್ತು.
ಇಂದು ನವದೆಹಲಿಯ ಜಲಶಕ್ತಿ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ಕೇಂದ್ರ ಸಚಿವರ ಗಮನ ಸೆಳೆದು 750 ಕೋಟಿ ರೂ.ಗಳ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರ ಸಚಿವರ ಸಭೆಯ ಬಳಿಕ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ರಾಜ್ಯದ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ನಾವು ಬದ್ಧರಾಗಿದ್ದೇವೆ. ವಿಶ್ವ ಬ್ಯಾಂಕ್ ನೆರವಿನ ಯೋಜನೆಗಳ ಅನುದಾನಕ್ಕೆ ನಾವು ಮಾಡಿದ ಮನವಿಗೆ ಕೇಂದ್ರ ಸಚಿವರು ಸಮ್ಮತಿಸಿದ್ದು, ಕಾರ್ಯಯೋಜನೆಯನ್ನು ಅಂತಿಮಗೊಳಿಸಿ ಅನುಮೋದನೆ ಪಡೆಯುತ್ತೇವೆ ಎಂದರು.
ಕೇಂದ್ರ ಸಚಿವರ ಜೊತೆಗೆ ನಡೆದ ಸಭೆಯಲ್ಲಿ ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಉಪಸ್ಥಿತರಿದ್ದರು.