ಬೆಂಗಳೂರು: ಬೆಲೆ ನಿಯಂತ್ರಣ ಮಾಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ತೈಲ ಬೆಲೆ ಏರಿಕೆ ಕುರಿತು ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಅವರು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗಿದೆ. ಬಡವರು, ಮಧ್ಯಮ ವರ್ಗದವರು ಜೀವನ ನಡೆಸೋದೇ ದುಸ್ಥರವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಾಗ ತಲೆ ಮೇಲೆ ಸಿಲಿಂಡರ್ಗಳನ್ನ ಹೊತ್ತು ದಿನನಿತ್ಯ ಪ್ರತಿಭಟನೆ ಮಾಡ್ತಿದ್ರು. ಬಳಿಕ ಮೋದಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಅಚ್ಚೇದಿನ್ ಆಯೇಗಾ ಅಂತಿದ್ರು. ಸ್ವರ್ಗ ಸೃಷ್ಠಿ ಮಾಡಿಬಿಡ್ತೀವಿ ಅಂತೆಲ್ಲಾ ಹೇಳಿದ್ರು. ಕೊಟ್ಟ ಭರವಸೆಗಳಂತೆ ಸರ್ಕಾರ ನಡೆದುಕೊಂಡಿಲ್ಲ. ಅಚ್ಚೇದಿನ್ ಬರ್ಲಿಲ್ಲ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ವಾಗ್ದಾಳಿ ನಡೆಸಿದರು.
ಇಡೀ ದೇಶ, ಜಗತ್ತಿನಲ್ಲೇ ಕೊರೊನಾ ಬಂತು. ಲಾಕ್ ಡೌನ್ ಆಯ್ತು, ಜನ ಉದ್ಯೋಗ ಕಳೆದುಕೊಂಡ್ರು. ದುಡಿಮೆ ಇಲ್ಲದೇ ಊಟಕ್ಕೆ ಪರದಾಡೋ ಪರಿಸ್ಥಿತಿ ಉಂಟಾಯ್ತು. ಒಂದ್ಕಡೆ ಕೊರೋನಾ ಇದ್ರೂ ಬೆಲೆ ಏರಿಕೆ ಮಾಡಿದ್ದಾರೆ. ತೆರಿಗೆ ಇಳಿಸುವ ಬದಲು ಪರೋಕ್ಷವಾಗಿ ತೆರಿಗೆ ಹೇರಲಾಗ್ತಿದೆ. ಇಂತಹ ಸಂದರ್ಭದಲ್ಲಿ ತೆರಿಗೆ ಇಳಿಸಬೇಕು. ತೆರಿಗೆ ಇಳಿಸದೆ ಪರೋಕ್ಷವಾಗಿ ತೆರಿಗೆ ಏರಿಸಿದ್ರು. ಜನ ಕೆಲಸ ಇಲ್ಲದೆ ಕಷ್ಟದಲ್ಲಿದ್ದಾರೆ. ಇನ್ನೊಂದೆಡೆ ತೆರಿಗೆ ಏರಿಕೆಯಿಂದ ಕಷ್ಟವಾಗಿದೆ ಎಂದರು.
ಸದನದಲ್ಲಿ ಶ್ರೀರಾಮನ ಚರ್ಚೆ:
ಇದೇ ವೇಳೆ ವಿಧಾನಸಭೆಯಲ್ಲಿ ಸಂಸದ ಸುಬ್ರಹ್ಮಣ್ಯಸ್ವಾಮಿ ಟ್ವೀಟ್ ಉಲ್ಲೇಖಿಸಿದ ಅವರು, ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 93, ಸೀತೆಯ ನೇಪಾಳದಲ್ಲಿ 51 ರೂ., ರಾವಣನ ಲಂಕಾದಲ್ಲಿ 53 ರೂ. ಎಂದು ತಿಳಿಸಿ ಗಮನ ಸೆಳೆದರು.
ಈ ವೇಳೆ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಈ ವೇಳೆ ನಿಮ್ಮ ಬಾಯಲ್ಲಿ ಜೈಶ್ರೀರಾಮ್ ಕೇಳೋದೇ ಚೆಂದ ಎಂದು ಬೊಮ್ಮಾಯಿ ಕಾಲೆಳೆದರು.
ಇದೇ ವೇಳೆ ಸಿದ್ದರಾಮಯ್ಯ ಅವರು, ಶ್ರೀರಾಮನನ್ನು ನೀವು ಗುತ್ತಿಗೆ ತೆಗೆದುಕೊಂಡಿದ್ದೀರೇನ್ರೀ. ನನ್ನ ಹೆಸರಿನಲ್ಲೇ ರಾಮ ಇದೆ. ನಮ್ಮೂರಿನಲ್ಲಿ ರಾಮಮಂದಿರಕ್ಕೆ ನಾನು ಹಣ ಕೊಟ್ಟಿದ್ದೇನೆ ಎಂದರು.
ನೀವು ರಾಜ್ಯಕ್ಕೆ ಬಯ್ಯಲ್ಲ:
ಪೆಟ್ರೋಲ್ ಬೆಲೆ ಏರಿಕೆ ಸಂಬಂಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸುತ್ತಿರುವ ವೇಳೆ ಯತ್ನಾಳ್ ಎದ್ದು ನಿಂತು ನೀವು ಕೇಂದ್ರ ಸರ್ಕಾರಕ್ಕೆ ಬೈಯ್ತೀರಿ. ಬರೇ ಮೋದಿ, ಕೇಂದ್ರ ಸರ್ಕಾರಕ್ಕೆ ಬೈಯ್ಯುತ್ತೀರಿ. ಆದರೆ ರಾಜ್ಯ ಸರ್ಕಾರವನ್ನು ಬಯ್ಯೋದೇ ಇಲ್ಲ ಎಂದು ಕುಟುಕಿದರು. ಆಗ ಕಾಂಗ್ರೆಸ್ ಸದಸ್ಯರು ಸರ್ಕಾರವನ್ನು ಬಯ್ಯಲು ನೀವೇ ಇದ್ದೀರಲ್ಲ ಎಂದು ಕಾಲೆಳೆದರು.
ಇದನ್ನೂ ಓದಿ: ನನ್ನ ರಾಜೀನಾಮೆಗೆ ದೆಹಲಿಯವರ ಬಳಿ ಉತ್ತರ ಕೇಳಿ: ತ್ರಿವೇಂದ್ರ ಸಿಂಗ್ ರಾವತ್