ಬೆಂಗಳೂರು: ಮಾದಕ ವಸ್ತು ಮಾರಾಟ ಜಾಲದ ತನಿಖೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ನಗರದಲ್ಲಿ ಬೃಹದಾಗಿ ವಿಸ್ತರಿಸಿಕೊಂಡಿರುವ ಡ್ರಗ್ಸ್ ದಂಧೆ ವಿಚಾರವಾಗಿ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಇಂದು ಬೆಳ್ಳಂಬೆಳಗ್ಗೆ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೈಫ್ ಹೆಸರಿನ ಆದಿತ್ಯ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆದಿತ್ಯ ಆಳ್ವಾ ಆರೋಪಿಯಾಗಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆದಿತ್ಯ ನಾಪತ್ತೆಯಾಗಿದ್ದಾನೆ. ಈತನ ಪತ್ತೆಗೆ ಸಿಸಿಬಿಯ ಒಂದು ತಂಡ ಶೋಧ ನಡೆಸುತ್ತಿದ್ದರೆ, ಮತ್ತೊಂದು ತಂಡ ಆದಿತ್ಯ ನಿವಾಸವನ್ನು ಪರಿಶೀಲನೆ ನಡೆಸುತ್ತಿದೆ.
ಜನತಾ ಪರಿವಾರದ ಹಿರಿಯ ರಾಜಕಾರಣಿಯಾಗಿದ್ದ ಆದಿತ್ಯ ಆಳ್ವಾ ತಂದೆ ಜೀವರಾಜ್ ಆಳ್ವ 80ರ ದಶಕದಲ್ಲಿ ಪ್ರಭಾವಿ ನಾಯಕರಾಗಿದ್ದರು. ರಾಜ್ಯ ಜನತಾ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.