ಬೆಂಗಳೂರು: ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಟೋರಿಯಸ್ ರೌಡಿ ಶೀಟರ್ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ (Firing) ಬಂಧಿಸಿದ್ದಾರೆ.
ಪಳನಿ ಅಲಿಯಾಸ್ ಕರ್ಚೀಫ್ ಪಳನಿ ಬಂಧಿತ ರೌಡಿಶೀಟರ್ (rowdy sheeter). ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಅಡಗಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ರೌಡಿ ನಿಗ್ರಹದಳದ ಎಸಿಪಿ ಹೆಚ್.ಎಸ್.ಪರಮೇಶ್ವರ್ ಹಾಗೂ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಈತನ ಬಂಧನ ವೇಳೆ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ಅವರ ಎಡಗೈ ಡ್ರ್ಯಾಗರ್ನಿಂದ ಚುಚ್ಚಿದ್ದ. ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಎಸಿಪಿ ಮೇಲೆಯೆ ಹಲ್ಲೆಗೆ ಮುಂದಾಗಿದ್ದ. ಆತ್ಮ ರಕ್ಷಣೆಗಾಗಿ ಸರ್ವೀಸ್ ಪಿಸ್ತೂಲ್ನಿಂದ ಆರೋಪಿ ಕಾಲಿಗೆ ಗುಂಡು ಹೊಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆ ಸೇರಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ (CCB Joint Police Commissioner Sandeep Patil) ತಿಳಿಸಿದ್ದಾರೆ.
ಇತ್ತೀಚೆಗೆ ಕೊಲೆ ಪ್ರಕರಣದಲ್ಲಿ ಭಾಗಿ:
ಇತ್ತೀಚೆಗೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮುನ್ನಕುಮಾರ್ ಎಂಬುವನ ಕೊಲೆ ಪ್ರಕರಣದಲ್ಲಿ(murder case) ಭಾಗಿಯಾಗಿದ್ದ. ದಾರಿ ಬಿಡುವ ವಿಚಾರಕ್ಕಾಗಿ ಮುನ್ನ ಕಿರಿಕ್ ಮಾಡಿಕೊಂಡಿದ್ದು, ಇದರಿಂದ ಅಸಮಾಧಾನಗೊಂಡ ಪಳನಿ ಹಾಗೂ ಆತನ ಗ್ಯಾಂಗ್ ಚಾಕವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿತ್ತು. ಮೃತನ ಪತ್ನಿ ಕೆಂಪಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
20ಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಭಾಗಿ:
20ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ(criminal activities ) ಭಾಗಿಯಾಗಿದ್ದ ಪಳನಿ ಅಶೋಕ ನಗರ, ಕೋಣನಕುಂಟೆ ಹಾಗು ಕೆ.ಎಸ್ ಲೇಔಟ್ ಠಾಣೆಯ ರೌಡಿಶೀಟರ್ ಎಂಬ ಕುಖ್ಯಾತಿ ಪಡೆದಿದ್ದ. ಈತನ ಮೇಲೆ ಅಶೋಕ ನಗರ, ಸುಬ್ರಹ್ಮಣ್ಯಪುರ ಹಾಗೂ ಬೆಳ್ಳಂದೂರು ಠಾಣೆಯಲ್ಲಿ 3 ಕೊಲೆ ಪ್ರಕರಣಗಳಿವೆ.
ಕಾಡುಗೋಡಿ, ಜಯನಗರ, ಕೋಣನಕುಂಟೆ, ಕೆ.ಎಸ್.ಲೇಔಟ್, ಹುಳಿಮಾವು, ಆಡುಗೋಡಿ, ವಿಲ್ಸನ್ ಗಾರ್ಡನ್ ಠಾಣೆಗಳಲ್ಲಿ ಕೊಲೆ ಯತ್ನ, ಸುಲಿಗೆ,ದರೋಡೆ, ಹಾಗೂ ಬೆದರಿಕೆ ಸೇರಿದಂತೆ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯ ಬಿದಿರು ಮಾರುಕಟ್ಟೆಯಲ್ಲಿ ಅಗ್ನಿ ಆಕಸ್ಮಿಕ: ಅಪಾರ ಪ್ರಮಾಣದ ಬಿದಿರು ನಾಶ