ಬೆಂಗಳೂರು: ರಾಜಧಾನಿಯಲ್ಲಿ ನಕಲಿ ಮಾರ್ಕ್ಸ್ ಶೀಟ್ ದಂಧೆ ತಲೆ ಎತ್ತಿದೆ. ಇಂಥದ್ದೊಂದು ಪ್ರಕರಣವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ.
ಗಂಡ-ಹೆಂಡತಿ ಸೇರಿಕೊಂಡು ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದು ಮುಖೇಶ್ ಹಾಗು ರೋಹಿ ಬಂಧಿತರು. ಮೂಲತಃ ಪಂಜಾಬ್ ಮೂಲದವರಾದ ಇವರು, ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿ ಪೀಣ್ಯ ಬಳಿಯ ಜಗತ್ ಜ್ಯೋತಿ ಎಜ್ಯುಕೇಶನ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳು ಎಂಎ, ಎಂಬಿಎ, ಬಿಸಿಎ, ಬಿಟೆಕ್, ಬಿಬಿಎ, ಬಿಕಾಂ, ಬಿಎಸ್ಸಿ ಸೇರಿ ಹಲವು ಡಿಗ್ರಿ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದರು. ಒಂದು ಡಿಗ್ರಿಗೆ ಅರವತ್ತರಿಂದ ಎಪ್ಪತ್ತು ಸಾವಿರದವರೆಗೆ ಹಣ ಪಡೆಯುತ್ತಿದ್ದರು. ಸಿವಿ ರಾಮನ್ ಯುನಿವರ್ಸಿಟಿ, ರವೀಂದ್ರನಾಥ್ ಠಾಗೋರ್ ಯುನಿವರ್ಸಿಟಿ, ಅಸೆಟ್ ಯುನಿವರ್ಸಿಟಿಗೆ ಸೇರಿದ ಮಾರ್ಕ್ ಕಾರ್ಡ್ಗಳನ್ನು ಆರೋಪಿಗಳು ನೀಡುತ್ತಿದ್ದರು ಎನ್ನಲಾಗಿದೆ.
ಐದು ನೂರಕ್ಕೂ ಹೆಚ್ಚು ಜನರಿಗೆ ಮಾರ್ಕ್ಸ್ ಕಾರ್ಡ್ ನೀಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.